Friday, 27 March 2009

ಹೊಸದೇನು ?

"ಹೊಸ ವರ್ಷದ ಶುಭಾಶಯಗಳು"
"ಧನ್ಯವಾದಗಳು, ನಿಮಗೂ ಸಹ"
ಕೇಳಿ, ಕೇಳಿ ಬೇಸತ್ತ ಅದೇ ಹಳೆಯ ಸಾಲುಗಳು, ಅದೇ ಕೈ ಕುಲುಕು
ಹೊಸದೇನು ಬಂತು?
ಎಲ್ಲ ಹಳೆಯದೆ.
ಹೊಸದೇನಿದೆ ಇಲ್ಲಿ?
ಹೊಸದೇನು??

ಅದೇ ಆಫೀಸು, ಅದೇ ಕೆಲಸ, ಅದೇ ಜನ
ದಿನ ನೋಡುವ ಅದೇ ಮುಖ, ಅದೆ ಬಿಳಿಯ ಮೀಸೆ
ಆದರೂ ಏನೋ ಹೊಸದು?!
ಕೈಯ್ಯಲ್ಲಿ ಸಿಹಿ ಪೇಡದ ಡಬ್ಬ

"ಅರೆ! ಇವರು ಮುಂದಿನ ತಿಂಗಳಲ್ಲವೆ ರಿಟೈರಾಗುವುದು?"
"ನನ್ನ ಮಗಳಿಗೆ ಮಗ ಹುಟ್ಟಿದ"
ಬಿಳಿ ಮೀಸೆಯ ಕೆಳಗೆ ಹೆಮ್ಮೆ, ಸಂತಸದ ನಗು

ಹೊಸದು ವೃದ್ಧಾಪ್ಯವೆ?!

ಅದೇ ಕ್ಯಾಂಟೀನು, ಅದೇ ತಿಂಡಿ,ಕಾಫಿ, ಅದೇ ಜನ
ಎದುರು ಟೇಬಲ್ಲಿನಲಿ ಕೂರುವ ಅದೆ ಕಪ್ಪು ಹುಡುಗಿ,
ಅದೆ ಕಂದು ಯೂನಿಫಾರ್ಮು

ಆದರೂ ಏನೋ ಹೊಸದು?!
ಮೆಹೆಂದಿ ಹಚ್ಚಿದ ಕೈಗಳಲ್ಲಿ ಮಿನುಗುವ ಉಂಗುರ
ಕಡುಗಪ್ಪು ಕಣ್ಣುಗಳಲ್ಲಿ ಹೊಳೆವ ಮಿಂಚು

ಹೊಸದು ಯೌವ್ವನವೆ?!

ಅದೆ ಕ್ಯಾಬು, ಅದೇ ಬೀದಿಯ ದೀಪ, ಅದೇ ಮನೆ, ಅದೇ ಬಾಲ್ಕನಿ
ಫುಟ್ಬಾಲು ಹಿಡಿದ ನೆರೆಮನೆಯ ಅದೆ ಪುಟ್ಟ ಹುಡುಗ

ಆದರೂ ಏನೋ ಹೊಸದು?!
ಕಿವಿಯಿಂದ ಕಿವಿವರೆಗೆ ಬಾಯಗಲಿಸಿದ ನಗು
ಮುಖ ಸಂತೋಷದ ಬುಗ್ಗೆ

ಹೊಸದು ಬಾಲ್ಯವೆ?!

ಕೇಳಿಯೇ ಬಿಟ್ಟೆ....
"ಏನಿಷ್ಟು ಖುಶಿ? ಏನು ಹೊಸದು?

ಕೈ ಚಪ್ಪಾಳೆ ತಟ್ಟುತ್ತ, ಕುಣಿಕುಣಿದು
ತಡೆತಡೆದು ಹೇಳಿದ ಪುಟ್ಟ ಹುಡುಗ
"ನಾಳೆ........ನಾಳೇ.........ನಾಳೆಯಿಂದ ಬೇಸಿಗೆ ರಜೆ "

ಧಡಧಡನೆ ಮೆಟ್ಟಿಲ ಧುಮುಕಿ ಹಾರಿ
ಆಡಲು ಓಡಿದ ಬೀದಿಗೆ

ಸಿಕ್ಕಿತ್ತು ಪ್ರಶ್ನೆಗೆ ಉತ್ತರ

ಹೊಸದು................. " ನಾಳೆ !"

ಹೊಸದು ನಾಳೆಯ ಕನಸು,
ಹೊಸದು ಭರವಸೆಯ ಬೆಳಕು,
ಹೊಸದು ದಿನದಿನವು ಬದಲಾಗಿ ಬೆರಗುಗೊಳಿಸುವ ಬದುಕು,
ಹೊಸದು ಜೀವನ ಪ್ರೀತಿ.

ಹೊಸದೆಂದರೆ.......

ಉದುರಿ, ನಲುಗಿದ ಹಳದಿ ಹೂ ಹಾಸಿನ ರಸ್ತೆಯ ಕಡೆಯ ತಿರುವಿನಲಿ
ಅರಳಿ, ನಳನಳಿಸಿ ನಗುವ ಕೆಂಪು ಗುಲ್ ಮೊಹರ್ ಹೂವು !