Thursday, 7 May 2009

ಮೇಲು-ಸೇತುವೆ

ಎಂಥ ಸುಂದರ ಮುಂಜಾನೆಯ ಪಯಣ
ಅಡೆತಡೆಗಳಿಲ್ಲದ ಈ ಮೇಲು ಸೇತುವೆಯ ಮೇಲೆ

ಸುಖನಿದ್ರೆಯ ಮುಗಿಸಿ ಮೆಲ್ಲಗೆ ಮೇಲೆದ್ದು
ಕಣ್ಣುಜ್ಜಿ ಕೆಂಪಗೆ ನಗುವ ಸೂರ್ಯ
ಇರುಳೆಲ್ಲ ಮಳೆಮರದ ಎಲೆಗಳಲಿ ಅಡಗಿದ್ದು
ತೆಳುಗುಲಾಬಿ ಬಣ್ಣದ ಹೂಗಳ ಮನಗೆದ್ದು
ಎಳೆ ಎಳೆಯಾಗಿ ಹಾರಿಸಿ ಕದ್ದೊಯ್ಯುವ ತಣ್ಣನೆ ಗಾಳಿ

ಎಂಥ ಸುಂದರ ದೃಶ್ಯ
ಹಿತದ ಕುಂಚವ ಪ್ರಶಾಂತತೆಯ ಬಣ್ಣದೊಳದ್ದಿ ಬಿಡಿಸಿದ ಚಿತ್ರ

ಈ ಮೇಲು ಸೇತುವೆಯ ಮೇಲೆ
ಗದರಿಸಿ ತಡೆವ ಕೆಂಪು ಸಿಗ್ನಲುಗಳಿಲ್ಲ
ಅಳುವ ಮಕ್ಕಳ ಹೊತ್ತು ಬೇಡುವ ಕೈಗಳೂ ಇಲ್ಲ

ನಡೆವವರಿಗಾಗಿ ನಿಲ್ಲೆನುವ ಝೀಬ್ರಾ ಪಟ್ಟೆಗಳಿಲ್ಲ
ಪೇಪರ್ರು, ಹತ್ತಿಯ ಕಡ್ಡಿ ಮಾರುವ ಸಣಕಲು ಹುಡುಗರೂ ಇಲ್ಲ

ಒಡೆದ ಪೈಪುಗಳ ಕಚಪಿಚ ಕೆಸರಿಲ್ಲ
ಕೊಳೆತು ನಾರುವ ಮಾರುಕಟ್ಟೆಯ ಸೈರಿಸಬೇಕಿಲ್ಲ

ಸುಮ್ಮನೆ ಸರಾಗವಾಗಿ ಮುಂದೆ ಸಾಗಿದರಾಯ್ತು
ಗಮ್ಯ ತಲುಪುವ ತನಕ ರಮ್ಯ ಪಯಣ

ಆದರೂ ಒಮ್ಮೊಮ್ಮೆ.......
ಸಹ ಪಯಣಿಗರ ಹಿಂದಿಕ್ಕೆ
ಮುಂದೆ ಸಾಗುವ ಭರದಿ
ಮೇಲುಸೇತುವೆಯ ಎಡದ ತುದಿಯನು ತಲುಪಿ
ಕೆಳಗಿನ ಕಹಿಸತ್ಯ ಕಣ್ಣಿಗೆ ಬಡಿದರೆ...??

ತಕ್ಷಣ ಕತ್ತು ತಿರುಗಿಸಿ
ಊರ್ಧ್ವ ಮುಖಿಯಾಗು
ಎಣಿಸು ಬಿಳಿಯ ಮೋಡದೊಳಗಿನ
ಮಳೆಯ ಹನಿಗಳನು

ರಮ್ಯ ಪಯಣಕೆ ಬೇಕು ದಿವ್ಯ ನಿರ್ಲಕ್ಷ
’ಇದ್ದದ್ದೆ ಇವರ ಪಾಡು...’
ಎಂಬ ಜಾಣಕುರುಡು