Sunday 30 March 2014

ಗಟ್ಟಿ

“ಕೈತುಂಬಾ ತುತ್ತು ಮಾಡಿ ಚಕಚಕನೆ ತಿನ್ನು
ಹೀಗೆ ಅಳುತ್ತಾ ತಿಂದರೆ ಮೈಗೆ ಹತ್ತುವುದಿಲ್ಲ
ಕೆನ್ನೆ ಒಣಗಿ ಸಣಕಲುಬಡ್ಡಿಯಾಗುವೆ ನೋಡು”
    ಎಂದು ಬೆದರಿಸಿ ಊಟ ಮಾಡಿಸುತ್ತಿದ್ದಳು ಅಮ್ಮ

ಸುಡುವ ಬಿರುಬಿಸಿಲಲ್ಲಿ  ಬೆಲ್ಟು ಚಪ್ಪಲಿ ತೊಟ್ಟು
ನೀಲಗಿರಿ ತೋಪು ದಾಟಿ ಕುಣಿಯುತ್ತ ಹೊರಟಿದ್ದೆವು
ಊರ ಕಾಲುದಾರಿಯಲಿ ಅಮ್ಮನ ಹಿಂದೆ ...
ಹುಲ್ಲ ಹೊರೆ ಹೊತ್ತು ನಡೆವಾಕೆ ಕೇಳಿದಳು
" ಓಹೋ ಏನಮ್ಮೋ... ಊರ ನೆಪ್ಪಾಯ್ತಾ
ಇಸ್ಕೋಲು ರಜವಾ...ನಾಲ್ಕೂ ಹೆಣ್ಣಾ ನಿನಗೇ  ......"
ತಟ್ಟನೆ
"ಇಲ್ಲಾ ನಾಲ್ಕೂ ಗಂಡು" ಎಂದು
ಬೆನ್ನು ತಿರುಗಿಸಿ ಭಾರದ ಕಿಟ್ ಬ್ಯಾಗ ಕೈ ಬದಲಾಯಿಸಿ
ನಮ್ಮೊಡನೆ ನಗುತ್ತ ನಡೆದಳು ಅಮ್ಮ

ಪ್ರತಿ ಮುಂಜಾನೆ ಮುಂಬಾಗಿಲ ತೊಳೆದು ರಂಗೋಲಿ ಹಾಕಿ,
ನಾಲ್ಕು ಜೊತೆ ಯೂನೀಫಾರಮ್ಮು,ಬೆಲ್ಟು , ಸಾಕ್ಸು-ಶೂ ಹೊಂದಿಸಿ
ಎಂಟು ಜಡೆ ಹೆಣೆದು ಟೇಪು ಮೇಲಕ್ಕೆ ಕಟ್ಟಿ
ಊಟದ ಬುಟ್ಟಿ ಕೈಗಿತ್ತು ಗೇಟಿನ ಬಳಿ ನಿಂತು ಕೈಬೀಸುತ್ತಿದ್ದಳು ಅಮ್ಮ

ಸ್ಕೂಲಿನ ವಾರ್ಷಿಕೋತ್ಸವಕ್ಕೆಂದು
ನಮ್ಮಳತೆಗೆ ತನ್ನ ಬ್ಲೌಸುಗಳಿಗೆ  ಟಕ್ಕು ಹಾಕಿ
ಗಾಂಧಿಬಜಾರೆಲ್ಲ ಅಲೆದಾಡಿ 
ಮಿಸ್ಸು ಹೇಳಿದ್ದೆ ಬಣ್ಣದ ಸರ, ಬಳೆ,ಓಲೆ ತಂದು
ಪೌಡರ್ ಬಳಿದು ನಮ್ಮ ಮೇಕಪ್ಪು ಮಾಡಿ
ಆಫೀಸಿಂದ ಸೀದಾ ಬರುವ ಅಣ್ಣನಿಗಾಗಿ
ಮೊದಲ ಸಾಲಲ್ಲಿ ಸೀಟು ಹಿಡಿದು  ಕೂತು  ಕಾಯುತ್ತಿದ್ದಳು ಅಮ್ಮ

ಮಹಾ ಕೆಲಸವೇನಲ್ಲ ಬಟ್ಟೆ ಒಗೆಯುವುದು
ಇಷ್ಟು ದಿನ ಮಾಡಿಲ್ಲದ್ದೇನು ..
ಮಕ್ಕಳಿಗೆ ಕಂಪ್ಯೂಟರ್ ಕೊಡಿಸಿ
ಒಗೆಯುವ ಬಂಡೆ ಮಜಬೂತಾಗಿದೆ
ಆರೋಗ್ಯಕ್ಕೂ ಒಳ್ಳೆಯದು ...ಎಂದು
ವಾಶಿಂಗ್ ಮೆಶೀನು ನಿರಾಕರಿಸಿಬಿಟ್ಟಳು ಅಮ್ಮ

"ಇನ್ನೂ ಓದು ಮುಗಿದಿಲ್ಲವಾ  ..   ಕೆಲಸ ಸಿಗಬೇಕಲ್ಲಾ...                          
ನೀವು ನಾಲ್ಕು ಮದುವೆ ಮಾಡಬೇಕಲ್ಲಾ ಪಾಪ ..."
ಎಂದು ಸಂತಾಪ ಸೂಚಿಸಿದವರಿಗೆ
"ಅಯ್ಯೋ ...ನಮಗೇನು ಚಿಂತೆ
ವಧುದಕ್ಷಿಣೆ ಕೊಟ್ಟು ಅವರೇ ಮದುವೆ ಮಾಡಬೇಕು....
ಈಗೆಲ್ಲಾ ಕಾಲ ಬದಲಾಗಿದೆ ಎಲ್ಲಿದ್ದೀರ ನೀವು "
ಎಂದು ಸಣ್ಣಗೆ ನಗುತ್ತಿದ್ದಳು ಅಮ್ಮ

ಆರತಕ್ಷತೆ  ಮುಗಿಸಿ ಪತಿಯ ಕೈಹಿಡಿದು
ಹೊರಡುವ ಮುನ್ನ ಸುಮ್ಮನೆ ಸುರಿವ ಕಣ್ಣೀರು.... 
         ಒರೆಸಿಕೊಳ್ಳುತ್ತ ಅಮ್ಮನ ಕಡೆ ನೋಡಿದೆ .....
ಅರೇ...
ನನ್ನ ಮುಖ ಪ್ರಶ್ನೆಯಾಯಿತು..
"ಅಮ್ಮಾ ನೀನೇಕೆ ಅಳುತ್ತಿಲ್ಲಾ ?! "

"ಊರೂರು ಅಲೆದು ಅಡ್ರೆಸ್ಸುಗಳ ಹುಡುಕಿ
ನಿನ್ನಂತ 
ಹಠಮಾರಿ ಹುಡುಗಿಗಿ ತಕ್ಕ ವರ ಸಿಗುವವರೆಗೂ ಕಾದು
 ನೀನು ಸೈ ಎಂದ ಮೇಲಲ್ಲವೇ ಮದುವೆ ಮಾಡಿದ್ದು...
ನನ್ನ ಮಕ್ಕಳ  ಮೇಲೆ ಸಂಪೂರ್ಣ ನಂಬಿಕೆ ನನಗೆ..."
ಎಂದು ಕಣ್ಣಲ್ಲೇ ಉತ್ತರಿಸಿ 

ಮತ್ತೆ 

"ಊಟ ಮಾಡುವಾಗ ಅಳಬೇಡ ಮೈಗೆ ಹತ್ತುವುದಿಲ್ಲ"
ಎಂದು ಸಣ್ಣಗೆ ನಕ್ಕಳು ಅಮ್ಮ .

 ಬಾಣಲೆಯಲ್ಲಿ ಕುದಿವ ನೀರಿಗೆ ಭತ್ತ ಸುರಿದು
 ಅರಳಿಸಿ ತೆಗೆದ ಅವಲಕ್ಕಿಯ ಹಾಗೆ
                                                  ಗಟ್ಟಿ ನಮ್ಮಮ್ಮ

Wednesday 19 March 2014

ಭಾವ


ಈ ದೇಶ ಬಲು ಚೆನ್ನ
ಎಲ್ಲೆಲ್ಲು ಸೊಬಗು ಬೆಡಗು ಬಿನ್ನಾಣ
ಕಲೆಗಾರ ಕಣ್ಣನ್ನೇ ಚೌಕಟ್ಟಾಗಿಸಿ
ಚಿತ್ರ ರಚಿಸಿದ ಹಾಗೆ

ವಸಂತದಲಿ ಎಲ್ಲೆಲ್ಲು ಬಣ್ಣದ ಓಕುಳಿ
ಮರಗಳ ತುಂಬೆಲ್ಲ ಕೆಂಪು ನೀಲಿ ಗುಲಾಬಿ ಹೂಗಳು
ನೆಲವೆಲ್ಲ ಹಸಿರು  ಹೊಳೆವ ಝರಿ ನೀರು

ಶಿಶಿರದಲಿ ನೆಲ ಬಾನು
ಮತ್ತು  ಅದರ ನಡುವಿನದೆಲ್ಲ   ಬಿಳಿ ಬಿಳಿ
ಅಲ್ಲಲ್ಲಿ ಕಪ್ಪಗೆ ಹಿಮತೆರೆದ ರಸ್ತೆಗಳು
ಖಾಲಿ ಹಾಳೆಯ ಮೇಲೆ
ಸಣ್ಣ ಹುಡುಗಿ ಪೆನ್ಸಿಲ್ಲು ಹಿಡಿದು
ಒಂದೆರೆಡು  ಗೆರೆ ಎಳೆದಂತೆ

ಕಾಲವೂ  ಇಲ್ಲಿ ಹಿಮಗಟ್ಟಿದೆ..

wordsworth ನ ಹಳದಿ ಹೂಗಳು ಇನ್ನೂ  ತಲೆದೂಗುತ್ತಿವೆ
ಕೀಟ್ಸ್ ನ ನೈಟಿಂಗೇಲ್ ಈಗಲು  ಹಾಡುತ್ತಿದೆ
ಶೆಲ್ಲಿಯ ozymandias ನಿಂತಿದ್ದಾನೆ ಮ್ಯೂಸಿಯಮ್ಮಿನಲಿ

ನೂರಿನ್ನೂರು ವರ್ಷದ ಕಟ್ಟಡಗಳೆಲ್ಲಾ ಸ್ಮಾರಕಗಳು!
ಕಾಯುವರದನು ಟೊಂಕಕಟ್ಟಿ ಯೋಧರಂತೆ
ನೆಲ ಜಲ ಭಾಷೆ ಭಾವದ ಮೇಲೆ
ಇವರಿಗೆ ಎಲ್ಲಿಲ್ಲದಭಿಮಾನ

ಭಾವದ ಮೇಲೆ ?!
ಹೌದು ..

ಬಸ್ಸಿನಲ್ಲಿ "ಆ ಆ ...ಆಕ್ಷಿ "  ಎಂದರೆ...
ಘೋರಾಪರಾಧ  ಮಾಡಿದವನ ಹಾಗೆ ಮುಖ ಮಾಡಿ
"ದಯವಿಟ್ಟು ಕ್ಷಮಿಸಿ" ಎನ್ನುವ ಶಾಲೆಯ ಹುಡುಗ

ತಾಸುಗಟ್ಟಲೆ ಅಂಗಡಿಯೆಲ್ಲ ಜಾಲಾಡಿ
ಸುಮ್ಮನೆ ತಲೆ ತಿಂದು
ಏನು ಕೊಳ್ಳದೆ ಹೊರನಡೆದರೂ
ಬೇಸರಿಸದೆ ನಗುತ "ಧನ್ಯವಾದಗಳು ಮತ್ತೆ ಬನ್ನಿ"                        
ಎನ್ನುವ ಅಂಗಡಿಯಾತ

ಫುಟ್ ಪಾತಿನಲಿ ದಾದಿಯ ಕೈಹಿಡಿದು
ನಡೆಯುವ ಪುಟ್ಟ  ಮಗು....
 ತಟ್ಟನೆ ರಸ್ತೆಗೆ ಓಡಿದರೆ
ಮಾರುದೂರದಲಿ ಸಾಲಾಗಿ
             ಸದ್ದಿಲ್ಲದೇ ನಿಲ್ಲುವ ಕಾರುಗಳು

ತಕ್ಷಣ ಓಡಿ ಮಗುವನು ತಬ್ಬಿ
ಬದಿಗೆ ಸಾಗಿದ ದಾದಿ
ಮುದ್ದಾಡುವಳು ಮಗುವನ್ನು
" ನನ್ನ ಚಿನ್ನ ರನ್ನ ಮುದ್ದುಮಣಿಯೆ
      ನೀ ನನ್ನ ಸಕ್ಕರೆಯ ಗೊಂಬೆ
            ಹೊಳೆವ ಕೆಂಪು ಸೇಬು
                     ನನ್ನ ಕಣ್ಣಿನ ಮಿಂಚು ......"  

ಆದರೆ......
ದಾದಿಯ ಮನದೊಳಗಿನ ಮನಕ್ಕೆ ಗೊತ್ತು
ಸತ್ಯ
.
.
"ಇದು ನನ್ನದಲ್ಲ"