ಜೀವನ ಒಂದು ಭೀಕರ ಸಮರ
ನಿಂತು ಎದೆಯೊಡ್ಡಿ ಎದುರಿಸಬೇಕು
ಧೀರ ಗಂಭೀರ ಹಿಮಾಲಯದಂತೆ .........
ಘನಿಸಿ ಹಿಮವಾದಳು ಪುಟ್ಟ ಹುಡುಗಿ
ಜೀವನ ಒಂದು ದುರ್ಗಮ ಪಯಣ
ಅಡೆತಡೆಗಳ ದಾಟಿ ಮುನ್ನುಗ್ಗಬೇಕು
ನಿಲ್ಲದೆ ಹರಿವ ನದಿಯಂತೆ ..........
ಕರಗಿ ನೀರಾದಳು ಪುಟ್ಟ ಹುಡುಗಿ
ಜೀವನ ಒಂದು ಮಹಾಯಾಗ
ಬೆಂಕಿಯಲಿ ಬೆಂದು ಹಗುರಾಗಬೇಕು
ಉರಿವ ಹೋಮದ ಧೂಮದಂತೆ ..........
ದಹಿಸಿ ಆವಿಯಾದಳು ಪುಟ್ಟ ಹುಡುಗಿ
ಗಾಳಿಯಲಿ ತೇಲಿ ದೂರ ಸಾಗಿದಳು
ಮೇಲೆ.......... ಬಹು ಮೇಲೇರಿದಳು
ಶೂನ್ಯದೋಳು ಲೀನವಾದಳು ಪುಟ್ಟ ಹುಡುಗಿ
ಪಾರಾಯಣ ನಿಲ್ಲಿಸಿ, ವ್ಯಾಸಪೀಠದ ಮೇಲೆ ಕೈಯ್ಯೂರಿ
ನಡುಮನೆಯೊಳಗಿ ಇಣುಕಿ ನೋಡಿದರು ರಾಯರು......
"ಅರೆ ಎಲ್ಲಿ ಹೋದಳು ನಮ್ಮ ಪುಟ್ಟಿ?
ಇಲ್ಲೆ ಕುಳಿತು ನಾನು ಹಾಕಿದ
ಕೂಡಿ ಕಳೆಯುವ ಲೆಕ್ಕ ಬಿಡಿಸುತ್ತಿದ್ದವಳು?!"