ಸಮಯ ಬಲು ಅಮೂಲ್ಯ
ಸುಮ್ಮನೆ ಪೋಲು ಮಾಡಬೇಡಿ
......
......
ಇತ್ತೀಚಿಗೆ ನನಗೆ
ಅಚಾನಕ್ಕಾಗಿ ಲಾಟರಿ ಹೊಡೆದು
ದಿನದ ಇಪ್ಪತ್ನಾಲ್ಕು
ಗಂಟೆಯ ಬಂಪರ್ ಬಹುಮಾನ ಬಂತು!
ಸಂತೋಷ ಹಂಚಿಕೊಳಲೆಂದು
ಫೋನು ಮಾಡತೊಡಗಿದೆ
ನೆಂಟರಿಷ್ಟರಿಗೆ……….
ಗೆಳೆಯ
ಗೆಳತಿಯರಿಗೆ..................... ಯಾರು ಉತ್ತರಿಸಲಿಲ್ಲ.
ಎಲ್ಲ ಬದುಕ ಬಯಲಲ್ಲಿ ಬಸವಳಿದು ಓಡುತ್ತಲಿದ್ದರು.....ಪಾಪ
ಇನ್ನು ಕೆಲವರು ವ್ಯಾಪ್ತಿ ಪ್ರದೇಶದ
ಹೊರಗಿದ್ದರು.
ಬಾಕಿ ಇದ್ದ ಕೆಲಸಗಳೆಲ್ಲ
ಖುಷಿಯಾಗಿ ಮಾಡಿಯೇ ಮಾಡಿದೆ..
ಇನ್ನೂ ಮಿಕ್ಕಿತ್ತು
ಬೇಜಾನು ಸಮಯ
ಸಿಕ್ಕ ಬಹುಮಾನವನ್ನೇನು
ಮಾಡುವುದು ..
ಅಲ್ಕೂತು ಇಲ್ಕೂತು
ಮಲ್ಲಕ್ಕ ಬಡವಾದಳಂತೆ....
ಬಡವಾಗಲು ನಾನೇನು
ನಿರಕ್ಷರ ಕುಕ್ಷಿಯೇ ?
"ಉಪಯೋಗಿಸಿ ಮಿಕ್ಕಿದ್ದು
ಏನು ಮಾಡಲಿ"
ಎಂದು ಅಂತರ್ಜಾಲವ ಕೇಳಿದೆ
"ಫ಼್ರಿಡ್ಜಿನಲ್ಲಿ
ಇಡಿ...ಹಾಗೆ ಬಿಟ್ಟರೆ ಹಾಳಾಗುತ್ತದೆ"....
ಯಾರೋ 'ಅನಾಮಿಕ'ನ ಯಾಹು ಉತ್ತರ!
ಸರಿ ಹಾಗೆ ಮಾಡಿದೆ
ಸಮಯವನ್ನೆಲ್ಲ ಒಂದು
ನಿರ್ವಾತ ಡಬ್ಬಿಯಲಿ ಹಾಕಿ
ಮುಚ್ಚಳ ಭದ್ರ ಪಡಿಸಿ ಫ಼್ರಿಡ್ಜಿನಲ್ಲಿಟ್ಟೆ
ಬೇಕಾದಾಗ ಬೇಕಾದಷ್ಟೇ
ತೆಗೆದು ಬಳಸುವೆ
ಸ್ನಾನ-ಪೂಜೆಗೆ,
ತಿಂಡಿ ಅಡಿಗೆಗೆ, ಕಸಮುಸುರೆ ಕೆಲಸಕ್ಕೆ
ದಿನಕಿಷ್ಟೆಂದು ತೆಗೆದು
ಬಳಸುತ್ತೇನೆ
ಒಮ್ಮೊಮ್ಮೆ ಅಂದಾಜು
ತಪ್ಪಾಗಿ ಹೆಚ್ಚು ಉಳಿಯುವುದುಂಟು
ಅದನ್ನು ಹಾಗೆ ಖರ್ಚು
ಮಾಡಿಬಿಡುವೆ............
ಬಾಲ್ಕನಿಯಲ್ಲಿ ಬಿದ್ದ ತರಗೆಲೆಗಳ ತೆಗೆಯಲು
ಸೋಫಾದ ಬದಿ ಅಂಟಿದ ವ್ಯಾಸಲೀನು
ಒರೆಸಲು
ಪತ್ರಿಕೆಯ ಮಕ್ಕಳ ಪುಟದ ಚುಕ್ಕಿಗಳ
ಚಿತ್ರ ಸೇರಿಸಲು.....
ಒಮ್ಮೊಮ್ಮೆ ವ್ಯಾಪ್ತಿ
ಪ್ರದೇಶದ ಹೊರಗಿದ್ದವರು ಒಳಗೆ ಬಂದು
ನನ್ನ ಫೋನು ರಿಂಗಣಿಸುವುದುಂಟು
ನನ್ನ ಕಿವಿಗೆ ಅಹಂ
ಎಂಬ ಇಯರ್ ಫೋನು ಜಡಿದಿದ್ದೇನೆ
ಯೂ ಟ್ಯೂಬಿನಲ್ಲಿ
ಹುಡುಗಿ ಹಾಡಿಗೆ ಹೆಜ್ಜೆ ಹಾಕುತ್ತಾಳೆ....
"ಈ ಪ್ರಪಂಚ ಹಿತ್ತಾಳೆಯದು...."
ಉಜ್ಜಲು ದೇವರು ಬಲು
ಪುರುಸೊತ್ತಾಗಿರಬೇಕು!
ಅಥವಾ ಅವನಿಗೆ ಬಿಡುವಿಲ್ಲದೆ…
ಎಲ್ಲಾ ಹೀಗೆ ನೀಲಿಗಟ್ಟುತ್ತಿದೆಯೋ ?
ನಾನು ಬೇಕಾದರೆ ನನ್ನ
ಸಮಯ ಸಾಲ ಕೊಡಬಹುದು ದೇವರಿಗೆ
ಫ಼್ರಿಡ್ಜಿನಲ್ಲಿ ಜಾಗವಾದೀತು ಹಾಲು ಹಣ್ಣಿಡಲು...
ರಾಜಕಾರಣಿಯಂತೆ ಅವನು
ತನ್ನ ಸಾಲ ತಾನೇ ಮನ್ನಾ ಮಾಡಿಕೊಂಡರೆ?
ವಸೂಲಾತಿಗೆ ನಾನೇ
ಮೇಲಕ್ಕೆ ಹೋಗಬೇಕಾದೀತು !
ಫ಼್ರಿಡ್ಜಿನಲ್ಲಿ
ಜಾಗ ಸಾಲದಿದ್ದರೆ ಏನು ಮಾಡಲಿ ಎಂದು
ಮತ್ತೆ ಅಂತರ್ಜಾಲವನೆ
ಕೇಳಿದೆ ...
"ಶೈತ್ಯಾಗರಗಳು
ಬಾಡಿಗೆಗೆ ದೊರೆಯುತ್ತವೆ" ಎಂದುತ್ತರಿಸಿತು ಗೂಗಲ್ಲು
ಹಾಗೆ ವಿಳಾಸಗಳು,
ಫೋನ್ ನಂಬರುಗಳು, ಹತ್ತಿರದ ದಾರಿಗಳು, ಬಾಡಿಗೆ
ದರಗಳು
ಎಂದೆಲ್ಲ
ಹದಿನಾರು ಸಾವಿರ ಕೊಂಡಿಗಳ ತೋರಿಸಿತು
ನಾನೀಗ ಸಮಯವನ್ನೆಲ್ಲ ದೊಡ್ಡ ಚೀಲಕ್ಕೆ ತುಂಬುತ್ತಿದ್ದೇನೆ
ಶೈತ್ಯಾಗಾರದಲ್ಲಿ
ಕೆಡದೆ ಕಾಪಾಡಲು
ಮುಂದೆ ಮುದಿಗಾಲಕ್ಕೆ ಬೇಕಾದಾಗ ತೆಗೆದು
ಉಪಯೋಗಿಸುವೆ
ನನ್ನ ತಾಜಾ ತಾಜಾ ಸಮಯವನು.....
ಅದುವರೆಗೂ ಓಝೋನು ಪೂರ್ತಿ ಹರಿದು...
ಭೂಮಿ
ಕರಗಿ ಹೋಗದಿದ್ದರೆ...
.................
ಸುಮ್ಮನೆ
ಪೋಲು ಮಾಡಬೇಡಿ
ಸಮಯ
- ಬಲು
ಅಮೂಲ್ಯ