Thursday, 7 May 2009

ಮೇಲು-ಸೇತುವೆ

ಎಂಥ ಸುಂದರ ಮುಂಜಾನೆಯ ಪಯಣ
ಅಡೆತಡೆಗಳಿಲ್ಲದ ಈ ಮೇಲು ಸೇತುವೆಯ ಮೇಲೆ

ಸುಖನಿದ್ರೆಯ ಮುಗಿಸಿ ಮೆಲ್ಲಗೆ ಮೇಲೆದ್ದು
ಕಣ್ಣುಜ್ಜಿ ಕೆಂಪಗೆ ನಗುವ ಸೂರ್ಯ
ಇರುಳೆಲ್ಲ ಮಳೆಮರದ ಎಲೆಗಳಲಿ ಅಡಗಿದ್ದು
ತೆಳುಗುಲಾಬಿ ಬಣ್ಣದ ಹೂಗಳ ಮನಗೆದ್ದು
ಎಳೆ ಎಳೆಯಾಗಿ ಹಾರಿಸಿ ಕದ್ದೊಯ್ಯುವ ತಣ್ಣನೆ ಗಾಳಿ

ಎಂಥ ಸುಂದರ ದೃಶ್ಯ
ಹಿತದ ಕುಂಚವ ಪ್ರಶಾಂತತೆಯ ಬಣ್ಣದೊಳದ್ದಿ ಬಿಡಿಸಿದ ಚಿತ್ರ

ಈ ಮೇಲು ಸೇತುವೆಯ ಮೇಲೆ
ಗದರಿಸಿ ತಡೆವ ಕೆಂಪು ಸಿಗ್ನಲುಗಳಿಲ್ಲ
ಅಳುವ ಮಕ್ಕಳ ಹೊತ್ತು ಬೇಡುವ ಕೈಗಳೂ ಇಲ್ಲ

ನಡೆವವರಿಗಾಗಿ ನಿಲ್ಲೆನುವ ಝೀಬ್ರಾ ಪಟ್ಟೆಗಳಿಲ್ಲ
ಪೇಪರ್ರು, ಹತ್ತಿಯ ಕಡ್ಡಿ ಮಾರುವ ಸಣಕಲು ಹುಡುಗರೂ ಇಲ್ಲ

ಒಡೆದ ಪೈಪುಗಳ ಕಚಪಿಚ ಕೆಸರಿಲ್ಲ
ಕೊಳೆತು ನಾರುವ ಮಾರುಕಟ್ಟೆಯ ಸೈರಿಸಬೇಕಿಲ್ಲ

ಸುಮ್ಮನೆ ಸರಾಗವಾಗಿ ಮುಂದೆ ಸಾಗಿದರಾಯ್ತು
ಗಮ್ಯ ತಲುಪುವ ತನಕ ರಮ್ಯ ಪಯಣ

ಆದರೂ ಒಮ್ಮೊಮ್ಮೆ.......
ಸಹ ಪಯಣಿಗರ ಹಿಂದಿಕ್ಕೆ
ಮುಂದೆ ಸಾಗುವ ಭರದಿ
ಮೇಲುಸೇತುವೆಯ ಎಡದ ತುದಿಯನು ತಲುಪಿ
ಕೆಳಗಿನ ಕಹಿಸತ್ಯ ಕಣ್ಣಿಗೆ ಬಡಿದರೆ...??

ತಕ್ಷಣ ಕತ್ತು ತಿರುಗಿಸಿ
ಊರ್ಧ್ವ ಮುಖಿಯಾಗು
ಎಣಿಸು ಬಿಳಿಯ ಮೋಡದೊಳಗಿನ
ಮಳೆಯ ಹನಿಗಳನು

ರಮ್ಯ ಪಯಣಕೆ ಬೇಕು ದಿವ್ಯ ನಿರ್ಲಕ್ಷ
’ಇದ್ದದ್ದೆ ಇವರ ಪಾಡು...’
ಎಂಬ ಜಾಣಕುರುಡು

13 comments:

Mahesh Sindbandge said...

I am first geetha...

I have to sit like a child to understand this..cuz its kannada... so i will read it on weekend.. :)

DOnt mind..:)

Cheers

ಸುಧೇಶ್ ಶೆಟ್ಟಿ said...

ಗೀತಾ ಅವರೇ...

ಸು೦ದರವಾದ ಕವನಕ್ಕೆ ಅಭಿನ೦ದನೆಗಳು ಮತ್ತು ಧನ್ಯವಾದಗಳು....

"ಹಿತದ ಕುಂಚವ ಪ್ರಶಾಂತತೆಯ ಬಣ್ಣದೊಳದ್ದಿ ಬಿಡಿಸಿದ ಚಿತ್ರ", "ಎಣಿಸು ಬಿಳಿಯ ಮೋಡದೊಳಗಿನ ಮಳೆಯ ಹನಿಗಳನು".... "ರಮ್ಯ ಪಯಣಕೆ ಬೇಕು ದಿವ್ಯ ನಿರ್ಲಕ್ಷ" ಈ ಸಾಲುಗಳು ತು೦ಬಾ ಹಿಡಿಸಿದವು....

ಮುತ್ತುಮಣಿ said...

ನಾನು ಸೆಕೆಂಡ್!

ಈ ಪದ್ಯ ಸ್ವಲ್ಪ ಹಾದಿ ತಪ್ಪಿದೆಯಲ್ಲ :)
ಇದು ಕನ್ನಡದಲ್ಲೆ ಹುಟ್ಟಿದ್ದು ಅಂತ ಅನ್ನಿಸ್ತಿದೆ, ರೈಟ್? ’ದಿವ್ಯ ನಿರ್ಲಕ್ಷ್ಯ’ ತುಂಬಾ ಇಷ್ಟವಾಯಿತು...

Geetha said...

@ Mahesh,

Yes... you are first Mahesh. U reminded me of the 'Child' in an AD, savouring Jamoons prepared by his mom for coming First in a race !!!

Let me give u a clue for the poem - "melu sethuve" = "fly over". the poem is about two different worlds one - above & one - below the flyover.

@ ಸುಧೇಶ್ ಶೆಟ್ಟಿ,

ಕವನ ಇಶ್ಟವಾಗಿದ್ದು ಖುಷಿಯಾಯ್ತು :)

@ ಮುತ್ತುಮಣಿ,

ಹೇ ನೀನು ಥರ್ಡು :)
& u r right!
ತಪ್ಪು ಗೊತ್ತಾಯ್ತು ಮೇಡಂ - "ಲಕ್ಷ" = ಗುರಿ, "ಲಕ್ಶ್ಯ" = ಗಮನ,"ನಿರ್ಲಕ್ಶ್ಯ" = ಗಮನಿಸದಿರುವುದು. ಸರಿನಾ?
ಕಾಲೆಳೆಯಕ್ಕೆ ಕಾಯ್ತಿರ್ತೀಯಾ...ಹಹಹ

ಮುತ್ತುಮಣಿ said...

ಅದೇನದು ನೀನು ವಿವರಿಸಿರೋದು ನಂಗೆ ಅರ್ಥಆಗ್ಲಿಲ್ಲ...

Geetha said...

@ಮುತ್ತುಮಣಿ,
ಲೇ..."ನಿರ್ಲಕ್ಷ" ಅಂತ ಪದ್ಯದಲ್ಲಿದೆ. ನೀನು "ನಿರ್ಲಕ್ಶ್ಯ" ಅಂತ ಬರೆದಿದೀಯ. ಅದಕ್ಕೆ "ಲಕ್ಷ" ತಪ್ಪಿರಬಹುದು,"ಲಕ್ಷ್ಯ" ಸರಿ ಇರಬೇಕು ಅಂದುಕೊಂಡೆ...ಇವಾಗ ಕನ್ನಡ ರತ್ನಕೋಶ ನೋಡಿದೆ.ಲಕ್ಷ, ಲಕ್ಷ್ಯ ಎಲ್ಲಾದಕ್ಕೂ ಒಂದೆ ಅರ್ಥ ಇದೆ!!!!

ಅದಕ್ಕೆ ಬೆಸ್ಟು ಸುಮ್ನೆ ಇಂಗ್ಲೀಷಲ್ ಬರೆಯೋದು..ಏನಂತೀಯ?

ಮುತ್ತುಮಣಿ said...

ಅದೆರಡಕ್ಕೂ ಒಂದೇ ಅರ್ಥ ಅಂತ ಗೆಸ್ ಮಾಡಿದೆ, ಅದಕ್ಕೇ ನಿನ್ನ ಕೇಳಿದ್ದು ಏನದು ವಿವರಣೆ ಅಂತ.

ಈ ಕವನ ಕನ್ನಡದಲ್ಲೇ ಹುಟ್ಟಿತು ಮತ್ತು ನಿನ್ನ ಕವನಗಳಲ್ಲಿ ಕಾಣುವ ’ಕನ್ಸರ್ನ್’ ನಂತಹ ಭಾವನೇ ಇದರಲ್ಲಿರಲಿಲ್ಲ. ಬದಲಾಗಿ ’ನಿರ್ಲಕ್ಷ್ಯ’ವಿತ್ತು. ಅದಕ್ಕೇ ದಾರಿ ತಪ್ಪಿದೆ ಎಂದೆ ಅಷ್ಟೇ. ಪದ ತಪ್ಪಾಗಿದೆ ಎಂದಲ್ಲ!

ಇನ್ನೂ ಇಂಗ್ಲೀಷಿನಲ್ಲಿ ಪದ್ಯ ಬರೆಯುವುದು, ಎರಡು ಭಾಷೆಯಲ್ಲೂ ಬರೀ ಅದಕ್ಕೇನಂತೆ.

Ittigecement said...

ಗೀತಾ....

ಸುಂದರವಾದ ಕಲ್ಪನೆ.....

ಇಂಗ್ಲೀಷ್ ಕವನದ ಛಾಯೆ ಇದೆ...

"ಗಮ್ಯ ತಲುಪುವ ತನಕ ರಮ್ಯ ಪಯಣ"

"ಊರ್ಧ್ವ ಮುಖಿಯಾಗು...
ಎಣಿಸು ಬಿಳಿಯ ಮೋಡದೊಳಗಿನ...
ಮಳೆಯ ಹನಿಗಳನು..."

ಈ ಸಾಲುಗಳು ತುಂಬಾ ಇಷ್ಟವಾದವು....
ಕನ್ನಡ ಪದಗಳಲ್ಲಿ ಹಿಡಿತ ಸಾಧಿಸುತ್ತಿರುವಿರಿ....

ಕನ್ನಡದಲ್ಲಿ ಬರೆಯುವದನ್ನು ಬಿಡಬೇಡಿ....

ಹೊಸತನವಿದೆ...
ನಿಮ್ಮದೇ ಛಾಪು ಇದೆ ನಿಮ್ಮ ಕನ್ನಡ ಕವನಗಳಲ್ಲಿ....

Geetha said...

@ಸಿಮೆಂಟು ಮರಳಿನ ಮಧ್ಯೆ,
ಧನ್ಯವಾದಗಳು ಸರ್.ತುಂಬಾ ಖುಶಿಯಾಯ್ತು ನಿಮ್ಮ ಕಮೆಂಟ್ ನೋಡಿ :)

ಜಲನಯನ said...

ಗೀತಾದೇವಿ, ಮೊದಲಿಗೆ ನನ್ನ ಸಂಶಯ ನಿವಾರಣೆಯಾಗಲಿ...
ಮೊದಲ ನೋಟ ನನ್ನದು ನಿಮ್ಮ ಬ್ಲಾಗೂಡಿನ ಮೇಲೆ....ಉತ್ತಮ ಮೇಲ್ನಡೆಯ ಕವನ...ಆದರೆ MUSINS ಅಂತ ಯಾಕೆ ಇಂಗ್ಲೀಷ್ ಗೆ ಮರೆಹೋಗಿದ್ದು..??
More attraction add ಮಾಡಲೋ..?
ಚನ್ನಾಗಿದೆ ಕವನ..ಚುಟುಕು-ಚುರುಕು ಮದ ಬಳಕೆ ಓದುವಾಗ ಆಳಕ್ಕೆ ಇಳಿದಂತೆ ಭಾಸವಾಗುತ್ತೆ...ಅದನ್ನು ಮೇಲೆ ಇಡಿ...sorry..KEEP IT UP.
ಇನ್ನು..ಲಕ್ಷ..ಲಕ್ಷ್ಯ..ಗಳ ದ್ವಂದ್ವ...ನನಗೆ ತಿಳಿದ ಮಟ್ಟಿಗೆ ಲಕ್ಷ್ಯ ಅಂದರೆ ಒಳ್ಳೆಯದು...ಇಲ್ಲವಾದರೆ ಲಕ್ಷ ಅನುಮಾನಗಳು ಸಾಧ್ಯ...
ಬನ್ನಿ ಅಲ್ಲ ನಮ್ಮ ಗೂಡಿಗೂ...

Geetha said...

ಅಪ್ಪಾ..
ಹೇಳು ಮಗು
ಇಂಗ್ಲೀಷ್ ಹೆಸರಿಗೆ ಆಕರ್ಷಣೆ ಇದೆ ಅಂತ ಇವ್ರು ಅನ್ಕೊಂಡಹಾಗಿದೆ ಅಪ್ಪ
ಅನ್ಕೊಂಡಿರಬಹುದು
ನಂಗೊತ್ತಿಲ್ಲ ಮಗು
ಹಳೆ ಪೋಸ್ಟುಗಳು ನೋಡಿದ್ರೆ ಹೆಸ್ರು ಸರಿಯಾಗಿದೆ ಅನ್ಸಲ್ವ ಅಪ್ಪ
ಅವರು ನೋಡಿಲ್ಲದಿರಬಹುದು ಮಗು
ನನ್ನ ಬ್ಲಾಗು, ನನ್ನ ಹೆಸರು, ನನ್ನಿಷ್ಟ ಅಂತ ಹೇಳಲಾ ಅಪ್ಪ
ಉದ್ಧಟತನ ಅಂತ ಬೈಕೋತಾರೆ ಮಗು
ಹಾಗಾದ್ರೆ ಸಂಶಯಕ್ಕೆ ಏನ್ ಮಾಡೋದು ಅಪ್ಪ?
"what is there in a name?" ಅಂತ ಷೇಕ್ಸ್ ಪಿಯರ್ ನ quote ಮಾಡಿ ಜಾಣ ಮರಿ ಹಾಗೆ ಜಾರಿಕೋ ಮಗು
;)

shivu.k said...

ಗೀತ ಮೇಡಮ್,

ಕವನ ಸೊಗಸಾಗಿದೆ.

ಆದರೂ ಒಮ್ಮೊಮ್ಮೆ.......
ಸಹ ಪಯಣಿಗರ ಹಿಂದಿಕ್ಕೆ
ಮುಂದೆ ಸಾಗುವ ಭರದಿ
ಮೇಲುಸೇತುವೆಯ ಎಡದ ತುದಿಯನು ತಲುಪಿ
ಕೆಳಗಿನ ಕಹಿಸತ್ಯ ಕಣ್ಣಿಗೆ ಬಡಿದರೆ...??

ಬಲು ಸೊಗಸಾದ ಸಾಲುಗಳು....

ಧನ್ಯವಾದಗಳು.

Geetha said...

@ shivu

ಕವನ ಮೆಚ್ಚಿದ್ದಕ್ಕೆ ಮತ್ತು ಕಮೆಂಟಿಸಿದ್ದಕ್ಕೆ ಧನ್ಯವಾದಗಳು ಸರ್.