Monday, 4 August 2014

ಲೆನ್ಸು

ಧುಮ್ಮಿಕ್ಕುವ ಜಲಪಾತಗಳು
ಬಿಳಿ ಮೋಡದ ಮಾಲೆಗಳು
ನಿಶ್ಚಲ ನೀಲಿ ಸರೋವರಗಳು
ಕೊನೆಯಿರದ ಹಸಿರ ಹಾಸು
          ದಿಕ್ಕು ದಿಗಂತಗಳೆಲ್ಲ ದೇವಲೋಕದ ಹಾಗೆ
                                               ದೃಶ್ಯ ಕಾವ್ಯ !

ಇಂಥ ಅದ್ಭುತ ರಮ್ಯ ಚಿತ್ರಗಳ
ಸದಾ ಕಾಲಕ್ಕೆ ಸೆರೆಹಿಡಿವ ತವಕ
ಲೆನ್ಸುಗಳ ಆಚೀಚೆ ಮಾಡಿ
'mode'ಗಳ ಬದಲಾಯಿಸಿ
          ಕೊನೆಯ ಕಲ್ಲಿನ ಮೇಲೆ ನಿಂತು ಕಣ್ಣು ಕಿರಿದಾಗಿಸಿ
                                               ಕ್ಲಿಕ್ ಕ್ಲಿಕ್ ಕ್ಲಿಕ್ ....

"ಛೇ...ಫೋಟೋ ಚೆನ್ನಾಗಿಲ್ಲ
ಬೆಳಕು ಕಡಿಮೆಯೇ? flash ಹಾಕಲೇ?
ಮೋಡದ  ನೆರಳೇ.. ಮಳೆಯೇ ..ಹಿಮವೇ ?
ಏನೂ ತಿಳಿಯುತ್ತಿಲ್ಲ ಸ್ವಲ್ಪ ನೋಡಿ ..
          ಸದ್ದಿರದೆ ಸೃಷ್ಟಿಯ ಸೊಬಗು ಸವಿಯುತ್ತಿದ್ದ
                                       ಪತಿರಾಯರ ಕೇಳಿದೆ ...

 "ದೇವರು ದಯೆಯಿಟ್ಟು ಕೊಟ್ಟ  ಲೆನ್ಸಿನ ಮುಂದೆ
ನಮ್ಮ SLR ಗಳು ಯಾವ ಮೂಲೆಗೆ ?!
ಈ ಕ್ಷಣವ ಕಣ್ಣಲ್ಲಿ ಸೆರೆ ಹಿಡಿದು
ಮನದಲ್ಲಿ  ಮುದ್ರಿಸು ಮರೆಯದಂತೆ "
             ತಲೆಯಲ್ಲಿ ತಟ್ಟನೆ ಬಲ್ಬು ಹೊತ್ತಿದ ಹಾಗಾಯ್ತು!
                                "ಹೌದಲ್ಲವೇ  ?  "

ಕಣಿವೆಗಳ  ನಡುವೆ  ನಗುವ ಬಯಲಲ್ಲಿ
ಹುಲ್ಲು ಮೇಯುತ್ತಿದ್ದವು ಹಸುಗಳು ಹಾಯಾಗಿ
ಕೊರಳ ಗಂಟೆಯ ನಾದ ಹೊಮ್ಮಿಸುತ್ತ ...
ಕೆಚ್ಚಲು ಬರಡಾದ ದಿನ ಕಸಾಯಿಖಾನೆ ಎಂದರಿಯದೆ ....
                       ನೋಟಕ್ಕೆ ಮರುಳಾಗಿ ಮತ್ತೆ ಕ್ಯಾಮೆರಾ ಹಿಡಿದು
                                   " ಒಂದು ಫೋಟೋ......." ಎಂದೆ

"ಶ್....ಸುಮ್ಮನೆ ಹಠ ಮಾಡ ಬೇಡ
ಅಂಗಡಿಗೆ ಹೋದಾಗ ಹಸುವಿನ ಗಂಟೆ ಕೊಡಿಸುವೆ
ರಿಟೈರ್ ಆದ ಮೇಲೆ ಹಸು ಸಾಕೋಣ ನಾವು .."
ಎಂದು ತೆಕ್ಕೆಯಲಿ ಹಿಡಿದರು
                        ಏನು ತೋಚದೆ 'ಹೂ....' ಎಂದು ಗೋಣಾಡಿಸಿ
                                              ಬೆಪ್ಪು ಬೆಪ್ಪಾಗಿ ನಕ್ಕೆ !

         





Wednesday, 7 May 2014

ಜೆಲ್ಲಿ ಮೀನು

ಎಂಥ ಕ್ಷುದ್ರ ಜೀವಿ
ಈ ಜೆಲ್ಲಿ ಮೀನು
ಇದರದ್ದು ಒಂದು ಬದುಕೇ?

ತಿನ್ನಲು ಒಂದು ಬಾಯಿ
 ತುಂಬಿಸಲು ಒಂದು ಹೊಟ್ಟೆ

ಹುಟ್ಟುವುದು ಸಾವಿರಗಟ್ಟಲೆಯಾಗಿ
ಹಸಿದಾಗೆಲ್ಲ ತಿನ್ನುವುದು
ಬೆಳೆಯುವುದು ಜೊಂಡು ಜೊಂಡಾಗಿ
ತೇಲುವುದು ಅಲೆಯೆದ್ದ ಕಡೆ

ಬುದ್ಧಿ, ಮನಸುಗಳಿಲ್ಲ
ಆಲೋಚನೆಯಂತು ಬಲುದೂರದ ಮಾತು
                      ಬದುಕಿ ಬಂದ ಭಾಗ್ಯವೇನು?

"ಏಯ್ ಹುಲುಮಾನವಳೆ
ಎಷ್ಟು ಬಡಬಡಿಸುತ್ತೀಯ  ...."
ತನ್ನ  ನುಣುಪು ಮೈ ತಿರುಗಿಸಿ
ಉದ್ದ ಜಟೆಯಿಂದ ಗಾಜು ಕುಟ್ಟಿ
                  ಹೇಳಿತು ಜೆಲ್ಲಿ ಮೀನು ...

"ಸೃಷ್ಟಿ ಚಿತ್ತಾರ ಜಾಲದಲಿ
ನಾನೊಂದು ಸಣ್ಣ ಕೊಂಡಿ
ನನ್ನ ಕೆಲಸ ನಾನು ಮಾಡಿಕೊಂಡಿರುವೆ
ಆಸೆ ನಿರಾಸೆಗಳಿಲ್ಲದೆ ...
ನನಗೆ ಬರಿ ಹೊಟ್ಟೆಯ ಹಸಿವು
                ತೀರಿದರೆ ನಿಶ್ಚಿಂತೆ.

ನಿನಗೆ ??

ಇಂದ್ರಿಯಗಳ ಹಸಿವು
ಮಿದುಳು, ಮನಸುಗಳ ಹಸಿವು
ತೀರದ ದಾಹ
ಬೇಕು ಬೇಕೆಂಬ ವಾಂಛೆ
ನೀನು ಮುಟ್ಟಿದ್ದೆಲ್ಲ ಹಾಳು
ನೆಲ ಜಲ ಬಾನೆಲ್ಲ ವಿಷ
ನಿನ್ನಿಂದ ಸೃಷ್ಟಿಯ ಸರ್ವನಾಶ...
ಮಾತನಾಡುವ ಮೊದಲು
   ಜಗದ ನಾಟಕದಲ್ಲಿ
      ನಿನ್ನ ಪಾತ್ರವ ನಿಭಾಯಿಸು..
                .................ನೆಟ್ಟಗೆ"
"ಫಟಾರ್...."
ನನ್ನ ಕೆನ್ನೆಗೆ ಬಾರಿಸಿತು ಜೆಲ್ಲಿ ಮೀನು
              ಗಾಜಿನಾಚೆಗೆ ತನ್ನ ನೀಳ ಜಟೆಯ ಹೊರಚಾಚಿ

ಬೆದರಿ ಅತ್ತಿತ್ತ ನೋಡಿದೆ
ಎಲ್ಲರು ಸೆರೆಹಿಡಿಯುವುದರಲ್ಲಿ ಮಗ್ನರಾಗಿದ್ದರು .....
           cameraಗಳ ಹಿಂದೆ ಮುಖ ಹುದುಗಿಸಿ....

ಯಾರು ನನ್ನ ಗಮನಿಸಿಲ್ಲದ್ದು ಖಾತರಿಯಾಗಿ
           ಹಲ್ಲುಬಿಟ್ಟು ಪೋಸು ಕೊಡತೊಡಗಿದೆ
                            ಜೆಲ್ಲಿ ಮೀನಿನ ಜೊತೆಗೆ.

Wednesday, 2 April 2014

ಸಮಯ

ಸಮಯ ಬಲು ಅಮೂಲ್ಯ
ಸುಮ್ಮನೆ ಪೋಲು ಮಾಡಬೇಡಿ
......
ಇತ್ತೀಚಿಗೆ ನನಗೆ ಅಚಾನಕ್ಕಾಗಿ ಲಾಟರಿ ಹೊಡೆದು
ದಿನದ ಇಪ್ಪತ್ನಾಲ್ಕು ಗಂಟೆಯ ಬಂಪರ್ ಬಹುಮಾನ ಬಂತು! 

ಸಂತೋಷ ಹಂಚಿಕೊಳಲೆಂದು ಫೋನು ಮಾಡತೊಡಗಿದೆ
ನೆಂಟರಿಷ್ಟರಿಗೆ……….
        ಗೆಳೆಯ ಗೆಳತಿಯರಿಗೆ..................... ಯಾರು ಉತ್ತರಿಸಲಿಲ್ಲ.
           ಎಲ್ಲ ಬದುಕ ಬಯಲಲ್ಲಿ ಬಸವಳಿದು ಓಡುತ್ತಲಿದ್ದರು.....ಪಾಪ
                     ಇನ್ನು ಕೆಲವರು ವ್ಯಾಪ್ತಿ ಪ್ರದೇಶದ ಹೊರಗಿದ್ದರು.

ಬಾಕಿ ಇದ್ದ ಕೆಲಸಗಳೆಲ್ಲ ಖುಷಿಯಾಗಿ ಮಾಡಿಯೇ ಮಾಡಿದೆ..
ಇನ್ನೂ ಮಿಕ್ಕಿತ್ತು ಬೇಜಾನು ಸಮಯ
ಸಿಕ್ಕ ಬಹುಮಾನವನ್ನೇನು ಮಾಡುವುದು ..
ಅಲ್ಕೂತು ಇಲ್ಕೂತು ಮಲ್ಲಕ್ಕ ಬಡವಾದಳಂತೆ....
ಬಡವಾಗಲು ನಾನೇನು ನಿರಕ್ಷರ ಕುಕ್ಷಿಯೇ ?

"ಉಪಯೋಗಿಸಿ ಮಿಕ್ಕಿದ್ದು ಏನು ಮಾಡಲಿ" 
                      ಎಂದು ಅಂತರ್ಜಾಲವ ಕೇಳಿದೆ
"ಫ಼್ರಿಡ್ಜಿನಲ್ಲಿ ಇಡಿ...ಹಾಗೆ ಬಿಟ್ಟರೆ ಹಾಳಾಗುತ್ತದೆ"....
             ಯಾರೋ 'ಅನಾಮಿಕ'ನ ಯಾಹು ಉತ್ತರ!
ಸರಿ ಹಾಗೆ ಮಾಡಿದೆ
ಸಮಯವನ್ನೆಲ್ಲ ಒಂದು ನಿರ್ವಾತ ಡಬ್ಬಿಯಲಿ ಹಾಕಿ
ಮುಚ್ಚಳ ಭದ್ರ ಪಡಿಸಿ ಫ಼್ರಿಡ್ಜಿನಲ್ಲಿಟ್ಟೆ
ಬೇಕಾದಾಗ ಬೇಕಾದಷ್ಟೇ ತೆಗೆದು ಬಳಸುವೆ
ಸ್ನಾನ-ಪೂಜೆಗೆ, ತಿಂಡಿ ಅಡಿಗೆಗೆ, ಕಸಮುಸುರೆ ಕೆಲಸಕ್ಕೆ
ದಿನಕಿಷ್ಟೆಂದು ತೆಗೆದು ಬಳಸುತ್ತೇನೆ
ಒಮ್ಮೊಮ್ಮೆ ಅಂದಾಜು ತಪ್ಪಾಗಿ ಹೆಚ್ಚು ಉಳಿಯುವುದುಂಟು
ಅದನ್ನು ಹಾಗೆ ಖರ್ಚು ಮಾಡಿಬಿಡುವೆ............
             ಬಾಲ್ಕನಿಯಲ್ಲಿ ಬಿದ್ದ ತರಗೆಲೆಗಳ ತೆಗೆಯಲು
                       ಸೋಫಾದ ಬದಿ ಅಂಟಿದ ವ್ಯಾಸಲೀನು ಒರೆಸಲು
                           ಪತ್ರಿಕೆಯ ಮಕ್ಕಳ ಪುಟದ ಚುಕ್ಕಿಗಳ ಚಿತ್ರ ಸೇರಿಸಲು.....

ಒಮ್ಮೊಮ್ಮೆ ವ್ಯಾಪ್ತಿ ಪ್ರದೇಶದ ಹೊರಗಿದ್ದವರು ಒಳಗೆ ಬಂದು
ನನ್ನ ಫೋನು ರಿಂಗಣಿಸುವುದುಂಟು 
ನನ್ನ ಕಿವಿಗೆ ಅಹಂ ಎಂಬ ಇಯರ್ ಫೋನು ಜಡಿದಿದ್ದೇನೆ
ಯೂ ಟ್ಯೂಬಿನಲ್ಲಿ ಹುಡುಗಿ ಹಾಡಿಗೆ ಹೆಜ್ಜೆ ಹಾಕುತ್ತಾಳೆ....
        "ಈ ಪ್ರಪಂಚ ಹಿತ್ತಾಳೆಯದು...."
ಉಜ್ಜಲು ದೇವರು ಬಲು ಪುರುಸೊತ್ತಾಗಿರಬೇಕು!
         ಅಥವಾ ಅವನಿಗೆ ಬಿಡುವಿಲ್ಲದೆ…
                       ಎಲ್ಲಾ ಹೀಗೆ ನೀಲಿಗಟ್ಟುತ್ತಿದೆಯೋ ?
ನಾನು ಬೇಕಾದರೆ ನನ್ನ ಸಮಯ ಸಾಲ ಕೊಡಬಹುದು ದೇವರಿಗೆ
ಫ಼್ರಿಡ್ಜಿನಲ್ಲಿ  ಜಾಗವಾದೀತು  ಹಾಲು ಹಣ್ಣಿಡಲು...
ರಾಜಕಾರಣಿಯಂತೆ ಅವನು ತನ್ನ ಸಾಲ ತಾನೇ ಮನ್ನಾ  ಮಾಡಿಕೊಂಡರೆ?
ವಸೂಲಾತಿಗೆ ನಾನೇ ಮೇಲಕ್ಕೆ ಹೋಗಬೇಕಾದೀತು !

ಫ಼್ರಿಡ್ಜಿನಲ್ಲಿ ಜಾಗ ಸಾಲದಿದ್ದರೆ ಏನು ಮಾಡಲಿ ಎಂದು
ಮತ್ತೆ ಅಂತರ್ಜಾಲವನೆ ಕೇಳಿದೆ ...
"ಶೈತ್ಯಾಗರಗಳು ಬಾಡಿಗೆಗೆ ದೊರೆಯುತ್ತವೆ" ಎಂದುತ್ತರಿಸಿತು ಗೂಗಲ್ಲು
ಹಾಗೆ  ವಿಳಾಸಗಳು, ಫೋನ್ ನಂಬರುಗಳು, ಹತ್ತಿರದ ದಾರಿಗಳು, ಬಾಡಿಗೆ ದರಗಳು 
                              ಎಂದೆಲ್ಲ ಹದಿನಾರು ಸಾವಿರ ಕೊಂಡಿಗಳ ತೋರಿಸಿತು

ನಾನೀಗ ಸಮಯವನ್ನೆಲ್ಲ ದೊಡ್ಡ ಚೀಲಕ್ಕೆ ತುಂಬುತ್ತಿದ್ದೇನೆ
ಶೈತ್ಯಾಗಾರದಲ್ಲಿ ಕೆಡದೆ ಕಾಪಾಡಲು
ಮುಂದೆ ಮುದಿಗಾಲಕ್ಕೆ ಬೇಕಾದಾಗ ತೆಗೆದು
ಉಪಯೋಗಿಸುವೆ ನನ್ನ ತಾಜಾ ತಾಜಾ ಸಮಯವನು.....          
 ಅದುವರೆಗೂ ಓಝೋನು ಪೂರ್ತಿ ಹರಿದು...
                               ಭೂಮಿ ಕರಗಿ ಹೋಗದಿದ್ದರೆ...
             
.................
ಸುಮ್ಮನೆ ಪೋಲು ಮಾಡಬೇಡಿ
ಸಮಯಬಲು ಅಮೂಲ್ಯ

Sunday, 30 March 2014

ಗಟ್ಟಿ

“ಕೈತುಂಬಾ ತುತ್ತು ಮಾಡಿ ಚಕಚಕನೆ ತಿನ್ನು
ಹೀಗೆ ಅಳುತ್ತಾ ತಿಂದರೆ ಮೈಗೆ ಹತ್ತುವುದಿಲ್ಲ
ಕೆನ್ನೆ ಒಣಗಿ ಸಣಕಲುಬಡ್ಡಿಯಾಗುವೆ ನೋಡು”
    ಎಂದು ಬೆದರಿಸಿ ಊಟ ಮಾಡಿಸುತ್ತಿದ್ದಳು ಅಮ್ಮ

ಸುಡುವ ಬಿರುಬಿಸಿಲಲ್ಲಿ  ಬೆಲ್ಟು ಚಪ್ಪಲಿ ತೊಟ್ಟು
ನೀಲಗಿರಿ ತೋಪು ದಾಟಿ ಕುಣಿಯುತ್ತ ಹೊರಟಿದ್ದೆವು
ಊರ ಕಾಲುದಾರಿಯಲಿ ಅಮ್ಮನ ಹಿಂದೆ ...
ಹುಲ್ಲ ಹೊರೆ ಹೊತ್ತು ನಡೆವಾಕೆ ಕೇಳಿದಳು
" ಓಹೋ ಏನಮ್ಮೋ... ಊರ ನೆಪ್ಪಾಯ್ತಾ
ಇಸ್ಕೋಲು ರಜವಾ...ನಾಲ್ಕೂ ಹೆಣ್ಣಾ ನಿನಗೇ  ......"
ತಟ್ಟನೆ
"ಇಲ್ಲಾ ನಾಲ್ಕೂ ಗಂಡು" ಎಂದು
ಬೆನ್ನು ತಿರುಗಿಸಿ ಭಾರದ ಕಿಟ್ ಬ್ಯಾಗ ಕೈ ಬದಲಾಯಿಸಿ
ನಮ್ಮೊಡನೆ ನಗುತ್ತ ನಡೆದಳು ಅಮ್ಮ

ಪ್ರತಿ ಮುಂಜಾನೆ ಮುಂಬಾಗಿಲ ತೊಳೆದು ರಂಗೋಲಿ ಹಾಕಿ,
ನಾಲ್ಕು ಜೊತೆ ಯೂನೀಫಾರಮ್ಮು,ಬೆಲ್ಟು , ಸಾಕ್ಸು-ಶೂ ಹೊಂದಿಸಿ
ಎಂಟು ಜಡೆ ಹೆಣೆದು ಟೇಪು ಮೇಲಕ್ಕೆ ಕಟ್ಟಿ
ಊಟದ ಬುಟ್ಟಿ ಕೈಗಿತ್ತು ಗೇಟಿನ ಬಳಿ ನಿಂತು ಕೈಬೀಸುತ್ತಿದ್ದಳು ಅಮ್ಮ

ಸ್ಕೂಲಿನ ವಾರ್ಷಿಕೋತ್ಸವಕ್ಕೆಂದು
ನಮ್ಮಳತೆಗೆ ತನ್ನ ಬ್ಲೌಸುಗಳಿಗೆ  ಟಕ್ಕು ಹಾಕಿ
ಗಾಂಧಿಬಜಾರೆಲ್ಲ ಅಲೆದಾಡಿ 
ಮಿಸ್ಸು ಹೇಳಿದ್ದೆ ಬಣ್ಣದ ಸರ, ಬಳೆ,ಓಲೆ ತಂದು
ಪೌಡರ್ ಬಳಿದು ನಮ್ಮ ಮೇಕಪ್ಪು ಮಾಡಿ
ಆಫೀಸಿಂದ ಸೀದಾ ಬರುವ ಅಣ್ಣನಿಗಾಗಿ
ಮೊದಲ ಸಾಲಲ್ಲಿ ಸೀಟು ಹಿಡಿದು  ಕೂತು  ಕಾಯುತ್ತಿದ್ದಳು ಅಮ್ಮ

ಮಹಾ ಕೆಲಸವೇನಲ್ಲ ಬಟ್ಟೆ ಒಗೆಯುವುದು
ಇಷ್ಟು ದಿನ ಮಾಡಿಲ್ಲದ್ದೇನು ..
ಮಕ್ಕಳಿಗೆ ಕಂಪ್ಯೂಟರ್ ಕೊಡಿಸಿ
ಒಗೆಯುವ ಬಂಡೆ ಮಜಬೂತಾಗಿದೆ
ಆರೋಗ್ಯಕ್ಕೂ ಒಳ್ಳೆಯದು ...ಎಂದು
ವಾಶಿಂಗ್ ಮೆಶೀನು ನಿರಾಕರಿಸಿಬಿಟ್ಟಳು ಅಮ್ಮ

"ಇನ್ನೂ ಓದು ಮುಗಿದಿಲ್ಲವಾ  ..   ಕೆಲಸ ಸಿಗಬೇಕಲ್ಲಾ...                          
ನೀವು ನಾಲ್ಕು ಮದುವೆ ಮಾಡಬೇಕಲ್ಲಾ ಪಾಪ ..."
ಎಂದು ಸಂತಾಪ ಸೂಚಿಸಿದವರಿಗೆ
"ಅಯ್ಯೋ ...ನಮಗೇನು ಚಿಂತೆ
ವಧುದಕ್ಷಿಣೆ ಕೊಟ್ಟು ಅವರೇ ಮದುವೆ ಮಾಡಬೇಕು....
ಈಗೆಲ್ಲಾ ಕಾಲ ಬದಲಾಗಿದೆ ಎಲ್ಲಿದ್ದೀರ ನೀವು "
ಎಂದು ಸಣ್ಣಗೆ ನಗುತ್ತಿದ್ದಳು ಅಮ್ಮ

ಆರತಕ್ಷತೆ  ಮುಗಿಸಿ ಪತಿಯ ಕೈಹಿಡಿದು
ಹೊರಡುವ ಮುನ್ನ ಸುಮ್ಮನೆ ಸುರಿವ ಕಣ್ಣೀರು.... 
         ಒರೆಸಿಕೊಳ್ಳುತ್ತ ಅಮ್ಮನ ಕಡೆ ನೋಡಿದೆ .....
ಅರೇ...
ನನ್ನ ಮುಖ ಪ್ರಶ್ನೆಯಾಯಿತು..
"ಅಮ್ಮಾ ನೀನೇಕೆ ಅಳುತ್ತಿಲ್ಲಾ ?! "

"ಊರೂರು ಅಲೆದು ಅಡ್ರೆಸ್ಸುಗಳ ಹುಡುಕಿ
ನಿನ್ನಂತ 
ಹಠಮಾರಿ ಹುಡುಗಿಗಿ ತಕ್ಕ ವರ ಸಿಗುವವರೆಗೂ ಕಾದು
 ನೀನು ಸೈ ಎಂದ ಮೇಲಲ್ಲವೇ ಮದುವೆ ಮಾಡಿದ್ದು...
ನನ್ನ ಮಕ್ಕಳ  ಮೇಲೆ ಸಂಪೂರ್ಣ ನಂಬಿಕೆ ನನಗೆ..."
ಎಂದು ಕಣ್ಣಲ್ಲೇ ಉತ್ತರಿಸಿ 

ಮತ್ತೆ 

"ಊಟ ಮಾಡುವಾಗ ಅಳಬೇಡ ಮೈಗೆ ಹತ್ತುವುದಿಲ್ಲ"
ಎಂದು ಸಣ್ಣಗೆ ನಕ್ಕಳು ಅಮ್ಮ .

 ಬಾಣಲೆಯಲ್ಲಿ ಕುದಿವ ನೀರಿಗೆ ಭತ್ತ ಸುರಿದು
 ಅರಳಿಸಿ ತೆಗೆದ ಅವಲಕ್ಕಿಯ ಹಾಗೆ
                                                  ಗಟ್ಟಿ ನಮ್ಮಮ್ಮ

Wednesday, 19 March 2014

ಭಾವ


ಈ ದೇಶ ಬಲು ಚೆನ್ನ
ಎಲ್ಲೆಲ್ಲು ಸೊಬಗು ಬೆಡಗು ಬಿನ್ನಾಣ
ಕಲೆಗಾರ ಕಣ್ಣನ್ನೇ ಚೌಕಟ್ಟಾಗಿಸಿ
ಚಿತ್ರ ರಚಿಸಿದ ಹಾಗೆ

ವಸಂತದಲಿ ಎಲ್ಲೆಲ್ಲು ಬಣ್ಣದ ಓಕುಳಿ
ಮರಗಳ ತುಂಬೆಲ್ಲ ಕೆಂಪು ನೀಲಿ ಗುಲಾಬಿ ಹೂಗಳು
ನೆಲವೆಲ್ಲ ಹಸಿರು  ಹೊಳೆವ ಝರಿ ನೀರು

ಶಿಶಿರದಲಿ ನೆಲ ಬಾನು
ಮತ್ತು  ಅದರ ನಡುವಿನದೆಲ್ಲ   ಬಿಳಿ ಬಿಳಿ
ಅಲ್ಲಲ್ಲಿ ಕಪ್ಪಗೆ ಹಿಮತೆರೆದ ರಸ್ತೆಗಳು
ಖಾಲಿ ಹಾಳೆಯ ಮೇಲೆ
ಸಣ್ಣ ಹುಡುಗಿ ಪೆನ್ಸಿಲ್ಲು ಹಿಡಿದು
ಒಂದೆರೆಡು  ಗೆರೆ ಎಳೆದಂತೆ

ಕಾಲವೂ  ಇಲ್ಲಿ ಹಿಮಗಟ್ಟಿದೆ..

wordsworth ನ ಹಳದಿ ಹೂಗಳು ಇನ್ನೂ  ತಲೆದೂಗುತ್ತಿವೆ
ಕೀಟ್ಸ್ ನ ನೈಟಿಂಗೇಲ್ ಈಗಲು  ಹಾಡುತ್ತಿದೆ
ಶೆಲ್ಲಿಯ ozymandias ನಿಂತಿದ್ದಾನೆ ಮ್ಯೂಸಿಯಮ್ಮಿನಲಿ

ನೂರಿನ್ನೂರು ವರ್ಷದ ಕಟ್ಟಡಗಳೆಲ್ಲಾ ಸ್ಮಾರಕಗಳು!
ಕಾಯುವರದನು ಟೊಂಕಕಟ್ಟಿ ಯೋಧರಂತೆ
ನೆಲ ಜಲ ಭಾಷೆ ಭಾವದ ಮೇಲೆ
ಇವರಿಗೆ ಎಲ್ಲಿಲ್ಲದಭಿಮಾನ

ಭಾವದ ಮೇಲೆ ?!
ಹೌದು ..

ಬಸ್ಸಿನಲ್ಲಿ "ಆ ಆ ...ಆಕ್ಷಿ "  ಎಂದರೆ...
ಘೋರಾಪರಾಧ  ಮಾಡಿದವನ ಹಾಗೆ ಮುಖ ಮಾಡಿ
"ದಯವಿಟ್ಟು ಕ್ಷಮಿಸಿ" ಎನ್ನುವ ಶಾಲೆಯ ಹುಡುಗ

ತಾಸುಗಟ್ಟಲೆ ಅಂಗಡಿಯೆಲ್ಲ ಜಾಲಾಡಿ
ಸುಮ್ಮನೆ ತಲೆ ತಿಂದು
ಏನು ಕೊಳ್ಳದೆ ಹೊರನಡೆದರೂ
ಬೇಸರಿಸದೆ ನಗುತ "ಧನ್ಯವಾದಗಳು ಮತ್ತೆ ಬನ್ನಿ"                        
ಎನ್ನುವ ಅಂಗಡಿಯಾತ

ಫುಟ್ ಪಾತಿನಲಿ ದಾದಿಯ ಕೈಹಿಡಿದು
ನಡೆಯುವ ಪುಟ್ಟ  ಮಗು....
 ತಟ್ಟನೆ ರಸ್ತೆಗೆ ಓಡಿದರೆ
ಮಾರುದೂರದಲಿ ಸಾಲಾಗಿ
             ಸದ್ದಿಲ್ಲದೇ ನಿಲ್ಲುವ ಕಾರುಗಳು

ತಕ್ಷಣ ಓಡಿ ಮಗುವನು ತಬ್ಬಿ
ಬದಿಗೆ ಸಾಗಿದ ದಾದಿ
ಮುದ್ದಾಡುವಳು ಮಗುವನ್ನು
" ನನ್ನ ಚಿನ್ನ ರನ್ನ ಮುದ್ದುಮಣಿಯೆ
      ನೀ ನನ್ನ ಸಕ್ಕರೆಯ ಗೊಂಬೆ
            ಹೊಳೆವ ಕೆಂಪು ಸೇಬು
                     ನನ್ನ ಕಣ್ಣಿನ ಮಿಂಚು ......"  

ಆದರೆ......
ದಾದಿಯ ಮನದೊಳಗಿನ ಮನಕ್ಕೆ ಗೊತ್ತು
ಸತ್ಯ
.
.
"ಇದು ನನ್ನದಲ್ಲ"