Friday, 27 March 2009

ಹೊಸದೇನು ?

"ಹೊಸ ವರ್ಷದ ಶುಭಾಶಯಗಳು"
"ಧನ್ಯವಾದಗಳು, ನಿಮಗೂ ಸಹ"
ಕೇಳಿ, ಕೇಳಿ ಬೇಸತ್ತ ಅದೇ ಹಳೆಯ ಸಾಲುಗಳು, ಅದೇ ಕೈ ಕುಲುಕು
ಹೊಸದೇನು ಬಂತು?
ಎಲ್ಲ ಹಳೆಯದೆ.
ಹೊಸದೇನಿದೆ ಇಲ್ಲಿ?
ಹೊಸದೇನು??

ಅದೇ ಆಫೀಸು, ಅದೇ ಕೆಲಸ, ಅದೇ ಜನ
ದಿನ ನೋಡುವ ಅದೇ ಮುಖ, ಅದೆ ಬಿಳಿಯ ಮೀಸೆ
ಆದರೂ ಏನೋ ಹೊಸದು?!
ಕೈಯ್ಯಲ್ಲಿ ಸಿಹಿ ಪೇಡದ ಡಬ್ಬ

"ಅರೆ! ಇವರು ಮುಂದಿನ ತಿಂಗಳಲ್ಲವೆ ರಿಟೈರಾಗುವುದು?"
"ನನ್ನ ಮಗಳಿಗೆ ಮಗ ಹುಟ್ಟಿದ"
ಬಿಳಿ ಮೀಸೆಯ ಕೆಳಗೆ ಹೆಮ್ಮೆ, ಸಂತಸದ ನಗು

ಹೊಸದು ವೃದ್ಧಾಪ್ಯವೆ?!

ಅದೇ ಕ್ಯಾಂಟೀನು, ಅದೇ ತಿಂಡಿ,ಕಾಫಿ, ಅದೇ ಜನ
ಎದುರು ಟೇಬಲ್ಲಿನಲಿ ಕೂರುವ ಅದೆ ಕಪ್ಪು ಹುಡುಗಿ,
ಅದೆ ಕಂದು ಯೂನಿಫಾರ್ಮು

ಆದರೂ ಏನೋ ಹೊಸದು?!
ಮೆಹೆಂದಿ ಹಚ್ಚಿದ ಕೈಗಳಲ್ಲಿ ಮಿನುಗುವ ಉಂಗುರ
ಕಡುಗಪ್ಪು ಕಣ್ಣುಗಳಲ್ಲಿ ಹೊಳೆವ ಮಿಂಚು

ಹೊಸದು ಯೌವ್ವನವೆ?!

ಅದೆ ಕ್ಯಾಬು, ಅದೇ ಬೀದಿಯ ದೀಪ, ಅದೇ ಮನೆ, ಅದೇ ಬಾಲ್ಕನಿ
ಫುಟ್ಬಾಲು ಹಿಡಿದ ನೆರೆಮನೆಯ ಅದೆ ಪುಟ್ಟ ಹುಡುಗ

ಆದರೂ ಏನೋ ಹೊಸದು?!
ಕಿವಿಯಿಂದ ಕಿವಿವರೆಗೆ ಬಾಯಗಲಿಸಿದ ನಗು
ಮುಖ ಸಂತೋಷದ ಬುಗ್ಗೆ

ಹೊಸದು ಬಾಲ್ಯವೆ?!

ಕೇಳಿಯೇ ಬಿಟ್ಟೆ....
"ಏನಿಷ್ಟು ಖುಶಿ? ಏನು ಹೊಸದು?

ಕೈ ಚಪ್ಪಾಳೆ ತಟ್ಟುತ್ತ, ಕುಣಿಕುಣಿದು
ತಡೆತಡೆದು ಹೇಳಿದ ಪುಟ್ಟ ಹುಡುಗ
"ನಾಳೆ........ನಾಳೇ.........ನಾಳೆಯಿಂದ ಬೇಸಿಗೆ ರಜೆ "

ಧಡಧಡನೆ ಮೆಟ್ಟಿಲ ಧುಮುಕಿ ಹಾರಿ
ಆಡಲು ಓಡಿದ ಬೀದಿಗೆ

ಸಿಕ್ಕಿತ್ತು ಪ್ರಶ್ನೆಗೆ ಉತ್ತರ

ಹೊಸದು................. " ನಾಳೆ !"

ಹೊಸದು ನಾಳೆಯ ಕನಸು,
ಹೊಸದು ಭರವಸೆಯ ಬೆಳಕು,
ಹೊಸದು ದಿನದಿನವು ಬದಲಾಗಿ ಬೆರಗುಗೊಳಿಸುವ ಬದುಕು,
ಹೊಸದು ಜೀವನ ಪ್ರೀತಿ.

ಹೊಸದೆಂದರೆ.......

ಉದುರಿ, ನಲುಗಿದ ಹಳದಿ ಹೂ ಹಾಸಿನ ರಸ್ತೆಯ ಕಡೆಯ ತಿರುವಿನಲಿ
ಅರಳಿ, ನಳನಳಿಸಿ ನಗುವ ಕೆಂಪು ಗುಲ್ ಮೊಹರ್ ಹೂವು !

9 comments:

ಚಂದ್ರಕಾಂತ ಎಸ್ said...

ಗೀತಾ

ಮೊಟ್ಟಮೊದಲನೆಯದಾಗಿ " ಯುಗಾದಿಯ ಶುಭಾಶಯಗಳು " ಎನ್ನಲು ಹೋದೆ. ನಿನ್ನ ಕವನದ ಮೊದಲ ಸಾಲುಗಳು ನೆನಪಿಗೆ ಬಂತು. ನಾನು ಈ ಪ್ರಶ್ನೆಯನ್ನು ಎಷ್ಟೋ ಬಾರಿ ಕೇಳಿಕೊಂಡಿರುವೆ. ಬೇರೆಯವರಲ್ಲಿ ಹೇಳಿದರೆ ಸಿನಿಕತನ ಎನ್ನುತ್ತಾರೆ.

ಕವನ ಮುಂದುವರಿದ ರೀತಿ ಸುಂದರವಾಗಿದೆ. ಬಹಳ ಸಹಜವಾಗಿ ಬಾಲ್ಯ, ಯೌವನ, ಮುಪ್ಪು- ಇವುಗಳಲ್ಲಿ ಯಾವುದು ಹೊಸದು ಎಂಬ ಪ್ರಶ್ನೆ ಹಾಕುತ್ತಾ " ನಾಳೆ"ಯ ಸುಂದರ ನಿರೀಕ್ಷೆಯೇ ಹೊಸತು ಎಂದು ಹೇಳಿ ಗುಲ್ ಮೊಹರ್ ನ್ನು ವರ್ಣಿಸಿರುವೆ. ಚಿತ್ತಾಲರ ಗುಲ್ ಮೊಹರ್ ಪದ್ಯ ಓದಿರುವೆಯಾ?

ನಿನ್ನ ಕನ್ನಡ ಕವನ ಅತ್ಯಂತ ಆತ್ಮೀಯವಾಗಿದೆ.

Geetha said...

ಧನ್ಯವಾದಗಳು ಮೇಡಮ್,

ನಿಮಗು ಯುಗಾದಿಯ ಶುಭಾಶಯಗಳು...ಬಹಳ ತಡವಾಗಿ..ಹಹ..

ಚಿತ್ತಾಲರ ಗುಲ್ ಮೊಹರ್ ಪದ್ಯ ನಾನು ಓದಿಲ್ಲ.ನಿಜವೇನೆಂದರೆ text bookನಲ್ಲಿರುವ ಪದ್ಯಗಳು ಬಿಟ್ಟು ಬೇರೆ ಕನ್ನಡ ಪದ್ಯ ನಾನು ಓದಿಯೇ ಇಲ್ಲ :(

Ittigecement said...

ಗೀತಾರವರೆ...

ನಿಮ್ಮ ಬ್ಲಾಗಿನಲ್ಲಿ ಕನ್ನಡ ನೋಡಿ ಖುಷಿಯಾಗಿದೆ...

ವಾವ್....!

ಹೊಸತನ ಹೊಸತು...ಚಿಂತನೆಯಿದೆ..
ಶೈಲಿಯಲ್ಲಿದೆ..
ಹೇಳಿದ ರೀತಿಯಲ್ಲಿದೆ...
ಕವನ...
ಚೇತೋಹಾರಿಯಾಗಿದೆ...

ಸುಂದರ ಕವನಕ್ಕಾಗಿ
ಅಭಿನಂದನೆಗಳು..

ಮುಂದುವರೆಸಿರಿ...

Mahesh Sindbandge said...

Hi Geetha...

happy belated yugadi...:)

Its been a long time you posting something...
i had been waiting for your arrival with solid poetry of yours...
Atalst you came to bang with this kannada flick on ugadi right?

I think i can read it and let me say what i understood..

You are compllaning about the oldness and nothing new on new year right?

Yes...i agree with you...
In olden days they use to plan things for new year and all...but nowadays we are too busy to think of all this...


Good one geetha-aure..:)

Cheers...

Geetha said...

@ ಸಿಮೆಂಟು ಮರಳಿನ ಮಧ್ಯೆ,

ತುಂಬ ಧನ್ಯವಾದಗಳು ಸರ್ ನಿಮ್ಮ ಸ್ಪೂರ್ತಿ ನೀಡುವ ಕಮೆಂಟಿಗೆ:)

@ mahesh sindbandge,
thanks for the wish.
very happy that u made an attemp at reading kannada! & u r understanding of the poem is quite good too.
indeed the poem complains about nothing being new, but at the end there is a realization 'tomorrow' is always new, with new dreams, new hopes & a new jest for life.

ಸುಧೇಶ್ ಶೆಟ್ಟಿ said...

ವಾಹ್.... ಅ೦ತು ಇ೦ತು ಕನ್ನಡ ಬ೦ತು:)

ಅದೆಷ್ಟು ಚೆನ್ನಾಗಿ ಬರೆದಿದ್ದೀರಿ ಕವನ ಗೀತಾ ಅವರೇ... ನನಗೆ ಕನ್ನಡದಲ್ಲಿ ಬರೆಯಲು ಬರುವುದಿಲ್ಲ ಅನ್ನುತ್ತಾ ಎಷ್ಟು ಚೆನ್ನಾಗಿ ಕವನ ಬರೆದಿದ್ದೀರಿ.

ನಿಮ್ಮ ಇ೦ಗ್ಲಿಷ್ ಕವನಗಳ ಶೈಲಿಯಲ್ಲಿರುವ ಈ ಕವನ ತು೦ಬಾ ಚೆನ್ನಾಗಿದೆ. ಪದಗಳನ್ನು ಬಳಸಿರುವ ರೀತಿ ತು೦ಬಾ ಹಿಡಿಸಿತು...

"ಉದುರಿ, ನಲುಗಿದ ಹಳದಿ ಹೂ ಹಾಸಿನ ರಸ್ತೆಯ ಕಡೆಯ ತಿರುವಿನಲಿ
ಅರಳಿ, ನಳನಳಿಸಿ ನಗುವ ಕೆಂಪು ಗುಲ್ ಮೊಹರ್ ಹೂವು..."

ತು೦ಬಾ ಇಷ್ಟವಾಯಿತು ಈ ಸಾಲುಗಳು....

ಹೀಗೆ ಬರುತ್ತಿರಲಿ ಕವನಗಳು, ಕಥೆಗಳು, ಲೇಖನಗಳು ಕನ್ನಡದಲ್ಲೂ ಸಹ...

Geetha said...

@ ಸುಧೇಶ್
ಮೆಚ್ಚುಗೆಯ ಕಮೆಂಟಿಗೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು :)
ಬರೆಯಲು ಪ್ರಯತ್ನಿಸುವೆ

ಮುತ್ತುಮಣಿ said...

ಹೆಲ್ಲೋ ಮ್ಯಾಡಮ್,

ಈ ಕವನಾನೂ ಸೂಪರ್! ಅಂತೂ ಸೀರಿಯಸ್ ಟೈಪನ್ನೂ ಬರೆಯಲು ಶುರುಮಾಡಿದೆ ಅನ್ನು.

ಆದರೆ, ಇದು ಯಾಕೋ ತುಂಬಾ ಸೀರಿಯಸ್ ಆಗೋಯ್ತು.
ಪ್ರತಿ ವರ್ಷ ಯುಗಾದಿಗೆ ಮಾಡೋ ಒಬ್ಬಟ್ಟು ಹೊಸದಲ್ವೆ? ತಗೊಳೋ ಬಟ್ಟೆ ಹೊಸದಲ್ವೆ? ಮತ್ಯಾಕೆ ಯೋಚ್ನೆ? ಹ್ಹ ಹ್ಹ ಹ್ಹ

Geetha said...

@ ಮುತ್ತುಮಣಿ,

ಯೋಚ್ನೇ?? ಎಲ್ಬಂತು ?! ಇದು ಬರಿ ಅನಾಲಿಸಿಸ್ಸು..

’ನಾಳೆ’ ತಿನ್ನೋ ಒಬ್ಬಟ್ಟಿನ ಬಗ್ಗೆ ಕನಸು, ಹಾಕ್ಕೊಳೊ ಹೊಸ ಬಟ್ಟೆ ಬಗ್ಗೆ ’ಕನಸು’ ಎಲ್ಲ ಹೊಸದು ಅಂತ ಒಪ್ಕೊಳತ್ತಲ್ಲ ಪದ್ಯ ಕೊನೆಯಲ್ಲಿ... ಹಿಹಿಹಿ