ಮಧ್ಯಾಹ್ನ ಮೂರರ ಸಮಯ
ಸುಡುವ ಬೇಸಿಗೆಯ ಬಿಸಿಲು
ಮುಂಬಾಗಿಲ ಮೆಟ್ಟಿಲ ಮೇಲೆ ನುಗ್ಗೆಯ ಮರದ ನೆರಳು
ನಿತ್ಯ ಅಲ್ಲೆ ಕುಳಿತು ಹೆಣೆಯುವಳು ಹುಡುಗಿ...
ಕನಸ ಕುಲಾವಿ........
ಹೊಳೆವ ಕ್ರೋಶದ ಕಡ್ಡಿಗಳ ಹಿಡಿದು
ಆಗಾಗ ನೆನೆಸಿಕೊಂಡಂತೆ ಬೀಸುವ ಗಾಳಿ
ಮಲ್ಲಿಗೆಯ ಗಿಡದ ತುಂಬ ಹೂವು
........ತಂಪು...ಕಂಪು...ಆಹ್ಲಾದ...
ಕುಲಾವಿ ಹೆಣೆದಾದ ಮೇಲೆ
ತುದಿಗೆಲ್ಲ ಕುಚ್ಚು ಕಟ್ಟಿ.......
ಚೆಂದ ಕಾಣಿಸಬೇಕೆಂದುಕೊಳ್ಳುವಳು ಹುಡುಗಿ
ನುಗ್ಗೆಯ ಮರದ ನೆರಳು ದೂರ ಸರಿದಂತೆಲ್ಲಾ
ಉಣ್ಣೆಯ ಉಂಡೆ ಸಣ್ಣದಾಗುತ್ತಿತ್ತು
ಕಡೆಗೊಮ್ಮೆ ಮುಗಿದೇ ಹೋಯ್ತು
ಕುಲಾವಿ ಪೂರ್ತಿಯಾಗಿಲ್ಲ ಇನ್ನೂ....
ಸುರಿವ ಸಂಜೆಯ ಮಳೆಯಲಿ
ಊರೆಲ್ಲ ಅಲೆದಳು.....
ಸಿಗಲಿಲ್ಲ ಬೇಕಾದ ಬಣ್ಣದ ಉಣ್ಣೆ
.
.
.
.
ಮುಂಬಾಗಿಲ ಮೆಟ್ಟಿಲ ಮೇಲೀಗ ನೆರಳಿಲ್ಲ
ಮೊದಲೆ ತಿರುಗುವ ಭೂಮಿ,
ಸ್ವಲ್ಪ ವಾಲಿಕೊಂಡಿದೆಯಂತಲ್ಲಾ.......
ಆಷಾಡದ ಗಾಳಿಗೆ ಉರುಳಿ ಬಿತ್ತು ನುಗ್ಗೆಯ ಮರ..
ಮಲ್ಲಿಗೆಯ ಗಿಡವೀಗ ಬನವಾಗಿದೆ,
ಹೂವು? ಒಂದೂ ಇಲ್ಲ
ಕಂಪಿಲ್ಲ...ತಂಪಿಲ್ಲ...
ಅಂಗಡಿಗಲೆದು ಸಾಕಾಗಿ
ಕುಲಾವಿಯ ಕತ್ತರಿಸಿದಳು ಹುಡುಗಿ
ಎರಡು ತುಂಡಾಗಿ...
ಷೋಕೇಸಿನ ಬಣ್ಣದ ಬೊಂಬೆಯ ಧೂಳೊರೆಸಲೊಂದು..
ಬಂದು, ಹೋಗುವ ಅತಿಥಿ-ಅಭ್ಯಾಗತರಿಗೆ ಕಾಲೊರೆಸಲೊಂದು..
ಹೊಳೆವ ಕ್ರೋಶದ ಕಡ್ಡಿ ಅಡುಗೆ ಮಾಡುವ ಕೈಗೆ
ಒಲೆಯ ತೂತು, ಸಂದುಗೊಂದುಗಳು,
ಎಣ್ಣೆಯ ಮಿಳ್ಳೆ, ಸೀದ ಪಾತ್ರೆಯ ಶುಚಿಗೊಳಿಸಲು...
ಮುಸುರೆಯ ಕಟ್ಟೆ ಪರಿಶುದ್ಧ ?!
ಕಡ್ಡಿಗಳೀಗ ಹೊಳೆಯುವುದಿಲ್ಲ...
ಕಪ್ಪು ಮಸಿ, ಕೊಳೆ....ಜಿಡ್ಡು...ಜಿಗುಟು
ಮಧ್ಯಾಹ್ನ ಮೂರರ ಸಮಯವೀಗ ಖಾಲಿ ಖಾಲಿ
ಕುಳಿತು ತೂಕಡಿಸುವಳು ಹುಡುಗಿ....
ತನ್ನ ಪಾಡಿಗೆ ತಾನು ಬಡಬಡಿಸುವುದು ಟೀ.ವಿ...
ಕೈಯಲ್ಲಿ ಸನ್ನೆಯ ಹಿಡಿದು ವಿಮಾನ ನಿಯಂತ್ರಿಸುವ ನೃತ್ಯಗಾರ್ತಿ
ಅರ್ಧ ನೋಡಿದ ಜಾಹೀರಾತು
ಅರ್ಥವಾಗದೆ ನಕ್ಕಳು ಹುಡುಗಿ ........ ದಡ್ಡಿ
ನಗಲಿಲ್ಲ ಕ್ರೋಶದ ಕಡ್ಡಿ.
10 comments:
ಗೀತ ಅವರೇ...
ನಿಮ್ಮ ಸು೦ದರ ಕವನವನ್ನು ಓದುವಾಗ ವೈದೇಹಿ ಅವರ "ಅಡುಗೆ ಮನೆ ಹುಡುಗಿ" ಕವನದ ನೆನಪಾಯಿತು. ಓದಿಲ್ಲದಿದ್ದರೆ ಓದಿ ಅದನ್ನು... ತು೦ಬಾ ಚ೦ದ ಇದೆ ಕವನ...
"ಮುಂಬಾಗಿಲ ಮೆಟ್ಟಿಲ ಮೇಲೀಗ ನೆರಳಿಲ್ಲ
ಮೊದಲೆ ತಿರುಗುವ ಭೂಮಿ,
ಸ್ವಲ್ಪ ವಾಲಿಕೊಂಡಿದೆಯಂತಲ್ಲಾ.......
ಆಷಾಡದ ಗಾಳಿಗೆ ಉರುಳಿ ಬಿತ್ತು ನುಗ್ಗೆಯ ಮರ..
ಮಲ್ಲಿಗೆಯ ಗಿಡವೀಗ ಬನವಾಗಿದೆ,
ಹೂವು? ಒಂದೂ ಇಲ್ಲ
ಕಂಪಿಲ್ಲ...ತಂಪಿಲ್ಲ..."
ಇ೦ತಹ ಕಲ್ಪನೆಗಳು ನಿಮಗೆ ಹೇಗೆ ಹೊಳೆಯುತ್ತದೆ ಎ೦ದು ನನಗೆ ಆಶ್ಚರ್ಯ ಆಗುತ್ತದೆ. ಕವಿಯ ಕಲ್ಪನಾ ಶಕ್ತಿಗೊ೦ದು ಸಲಾಮ್...
"ಕೈಯಲ್ಲಿ ಸನ್ನೆಯ ಹಿಡಿದು ವಿಮಾನ ನಿಯಂತ್ರಿಸುವ ನೃತ್ಯಗಾರ್ತಿ" - ಏನೀ ಸಾಲಿನ ಅರ್ಥ?
- ಸುಧೇಶ್
[ಸ್ವಲ್ಪ ಆಫೀಸ್ ಕೆಲಸದ ನಡುವೆ ಬ್ಯುಸಿ ಇದ್ದುದು ನಿಜ... ಆದಷ್ಟು ಬೇಗ ಒ೦ದು ಧಾರಾವಾಹಿಯನ್ನು ಬರೆಯುವ ಯೋಜನೆಯಲ್ಲಿದ್ದೇನೆ:)]
:-(
I have a long way to go for understanding this :-(
ಗೀತಾರವರೆ...
ನಿಮ್ಮ ಕಲ್ಪನೆ ಅದ್ಭುತ...!
ನೀವು ಇಂಗೀಷ್ ಕವಿತೆಗಳನ್ನು ತುಂಬಾ ಓದುತ್ತೀರಾ...?
ಕವನ ಓದಿಯಾದ ಮೇಲೂ..
ಮತ್ತೆ ಮತ್ತೆ ಕಾಡುತ್ತದೆ...
ಮೊದಲು ಈ ನಿಮ್ಮ ಕವಿತೆ ಓದಿ ನಾನು ಉದ್ಗರಿದ್ದು "ವಾಹ್..!!"
ಅಭಿನಂದನೆಗಳು...
ಕತೆ ಏನು ಅಂತ ಗೊತ್ತಾಗ್ಲಿಲ್ಲ? (ಮದುವೆ ಬಗ್ಗೆ ಅನ್ನಿಸುತ್ತೆ!?) ವಿಷಾದ ಚೆನ್ನಾಗಿ ಮೂಡಿಬಂದಿದೆ.
ಸುಧೇಶ್ ಅವರೆ ಅದೇನು ಅಂತ ನನಗೆ ಗೊತ್ತಾಯಿತು-
"ಖಾಟ್ ಇನ್ ದ ರಾಂಗ್ ಜಾಬ್?" ಎಂದುಕೊಂಡು ’ಮಾನ್ಸಟರ್’ನ ಒಂದು ಅಡ್ವರ್ಟೈಸ್ಮೆಂಟ್ ಬರುತ್ತೆ ನೋಡಿ ಅದೇ ಅದು :)
ಹೋ ಈಗ ಹೊಳೀತು ಕಥೆ! "ಖಾಟ್ ಇನ್ ದ ರಾಂಗ್ ಜಾಬ್", ಇದು ನೆನ್ನೆ ಯಾಕೆ ನನಗೆ ಹೊಳೀಲಿಲ್ಲವೋ?
@ ಸುಧೇಶ್ ಶೆಟ್ಟಿ
hello sudhesh
ಆ ಕವನ ನಾನು ಓದಿದ್ದೇನೆ - ಪಿಯುಸಿ ಕನ್ನಡ ಟೆಕ್ಸ್ಟ್ ಬುಕ್ ನಲ್ಲಿ ಇತ್ತು. ಒಳ್ಳೆಯ ಪದ್ಯ. ಪೂರ್ತಿ ನೆನಪಿಲ್ಲ. ಅದ್ರೆ ಒಂದು ಸಾಲು ನೆನಪಿದೆ - ಹುಡುಗಿ ವಿಮಾನದ ಸದ್ದು ಕೇಳಿ ಅದೇ ಅಯೋಧ್ಯೆಗೋ , ಲಂಕೆಗೋ ಅಂತ ಸುಮ್ಮನಾಗುತ್ತಾಳೆ. ಆ ಸಾಲು ಬಂದಾಗ ಕ್ಲಾಸಲ್ಲಿ ಯಾರೋ "ಸ್ವಿಟ್ಜರ್ ಲ್ಯಾಂಡಿಗೋ, ಮಾರಿಷಸ್ಸಿಗೋ ಆದ್ರೆ ಹೋಗ್ಬಹುದು" ಅಂದರು!! ಹಹಹ
"ಕೈಯಲ್ಲಿ..." ಸಾಲು - ಮುತ್ತು ಹೇಳಿದಂತೆmonster.com ನ ಜಾಹಿರಾತು.
ಓಹ್....ಧಾರವಾಹಿಯಾ!!! ಓದಲು ಕಾಯುತ್ತಿರುವೆ.
@ Mahesh Sindbandge,
hi Mahesh...take help from your kannadiga friends...
@ ಸಿಮೆಂಟು ಮರಳಿನ ಮಧ್ಯೆ
ಇಂಗ್ಲೀಷ್ ಕವನಗಳು ಓದುತ್ತಿದ್ದೆ ಸರ್...ಸ್ಕೂಲಲ್ಲಿ....ಹಹ....
ಧನ್ಯವಾದಗಳು ಸರ್
@ ಮುತ್ತುಮಣಿ
ಹೇ...ನೀನೆ ಪ್ರಶ್ನೆ ಕೇಳ್ತೀಯಾ...ನೀನೆ ಉತ್ತರ ಕೊಡ್ತೀಯಾ..ಒಳ್ಳೆ ಹುಡುಗಿ ...
( ಕಥೆ ನಿನ್ನ ಕಲ್ಪನೆಗೆ ಬಿಟ್ಟಿದ್ದು )
ಗೀತಾ ಅವರೇ....
ಹ್ಮ್.. ಹೌದು ಅದು ಪಿ.ಯು.ಸಿ ಯಲ್ಲಿ ಇತ್ತು. ಮತ್ತೊಮ್ಮೆ ವೈದೇಹಿ ಅವರು ನಮ್ಮ ಕಾಲೇಜಿನ ಫ೦ಕ್ಷನ್ ಗೆ ಬ೦ದಿದ್ದಾಗ ಆ ಕವನದ ಬಗ್ಗೆ ಮಾತಾಡಿದ್ದರು....
ಈಗ ಅರ್ಥವಾಯಿತು "ಕೈಯಲ್ಲಿ ಸನ್ನೆಯ...." ವಾಕ್ಯದ ಅರ್ಥ....
ಹೇಮಾ ನಿಮಗೂ ಥ್ಯಾ೦ಕ್ಸ್...:):)
ಗೀತಾ ಅವರೇ, ಅರುಹಿದ್ದು ಒಂದು ಕಲ್ಪನೆಗೆ ಬಿಟ್ಟದ್ದು ಇನ್ನೊಂದು...ಚನ್ನಾಗಿವೆ ಸಾಲುಗಳು...ಕೈಯಲ್ಲಿ ಸನ್ನೆ ವಿಮಾನ ನಿಯಂತ್ರಿಸುವ ನೃತ್ಯಗಾತಿ....?? ವಿಮಾನದ ಒಳಗೋ..? ಹೊರಗೋ..?
ಯೋಚನಾ ಲಹರಿಯ ದಿಶೆ ಮತ್ತು ತೀವ್ರತೆ ಶ್ಲಾಘನೀಯ...ಮುಂದುವರೆಯಲಿ...ಭಾವ ಮಂಥನ....ಬಿಡುವಿನಲ್ಲಿ ನಮ್ಮ ಗೂಡಿನತ್ತಲೂ ಬರಬಹುದಲ್ಲ...???
@ ಸುಧೇಶ್
ಕಾಲೇಜು ಫಂಕ್ಷನ್ನಿಗೆ "ವೈದೇಹಿ"ಯವರನ್ನ ಕರೆಸಿದ್ದು ಕೇಳಿ ಖುಶಿಯಾಯ್ತು...ಇಲ್ಲಿ...ನಮ್ಮೂರಲ್ಲಿ ಸಾಹಿತಿಗಳೀಗೂ ಕಾಲೇಜಿಗೂ ಬಲು ದೂರ!
@ ಜಲನಯನ
ಧನ್ಯವಾದಗಳು ಸರ್ ಕಮೆಂಟಿಗೆ.
ನೃತ್ಯಗಾತಿ ವಿಮಾನದ ಹೊರಗೆ..
ನಿಮ್ಮ ಗೂಡಿಗೆ ಬರದೆಯೇ ನಿಮ್ಮ ಹಿಂದಿನ ಕಮೆಂಟಿಗೆ ಹಾಗೆ ರಿಪ್ಲೈ ಮಾಡಲಗುತ್ತಿರಲಿಲ್ಲವಲ್ಲ ಸರ್.....
Post a Comment